No Ads

ಬಿಜೆಪಿ; ‘ಜಿಲ್ಲಾಧ್ಯಕ್ಷರ ಆಯ್ಕೆ’ ವಿದ್ಯಮಾನ; ಪಕ್ಷದ ಆಂತರಿಕ ಭಿನ್ನಮತ ಇನ್ನಷ್ಟು ತೀವ್ರ.

ಕರ್ನಾಟಕ 2025-01-30 10:46:35 67
post

ಜಿಲ್ಲಾಧ್ಯಕ್ಷರ ನೇಮಕ 3 ಜಿಲ್ಲೆಗಳ ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ, ಅದರಲ್ಲಿ ಹಾಲಿ 16 ಮುಖಂಡರಿಗೆ ಮತ್ತೆ ಮಣೆ ಹಾಕಲಾಗಿದೆ. ಏಳು ಹೊಸ ನಾಯಕರು ಅವಕಾಶವನ್ನು ಪಡೆದುಕೊಂಡಿದ್ದಾರೆ. ಇಲ್ಲಿ, ವಿಜಯೇಂದ್ರ ಬಣ ಮೇಲುಗೈ ಸಾಧಿಸಿದೆ ಎಂದು ಹೇಳಲಾಗುತ್ತಿದೆ. ಇದು, ಪಕ್ಷದ ಆಂತರಿಕ ಭಿನ್ನಮತ ಇನ್ನಷ್ಟು ತೀವ್ರಗೊಳ್ಳಲು ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

ಪಕ್ಷದ ಸಂಘಟನಾತ್ಮಕ ಜಿಲ್ಲೆಗಳ ಅರ್ಧದಷ್ಟು ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕವಾದರೆ ಮಾತ್ರ, ರಾಜ್ಯಾಧ್ಯಕ್ಷರ ಚುನಾವಣೆಗೆ ಅರ್ಹವಾಗಲಿದೆ ಎನ್ನುವ ಕಾನೂನು ಬಿಜೆಪಿಯಲ್ಲಿದೆ. ಉಳಿದ ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕಕ್ಕೆ ನಿರ್ದಿಷ್ಟವಾದ ದಿನಾಂಕವನ್ನು ಸದ್ಯದಲ್ಲೇ ಗೊತ್ತು ಪಡಿಸಲಾಗುತ್ತದೆ.

ಬೆಂಗಳೂರು ನಗರ ವ್ಯಾಪ್ತಿಯ ಮೂರು ಸಂಘಟನಾತ್ಮಕ ಜಿಲ್ಲೆಗಳಾದ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಯಿತು. ಈ ವೇಳೆ, ಈ ಭಾಗದ ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ಶಾಸಕರಾದ ಡಾ.ಅಶ್ವಥ್ ನಾರಾಯಣ, ಬೈರತಿ ಬಸವರಾಜ, ಮಂಜುಳಾ ಲಿಂಬಾವಳಿ, ಮುನಿರಾಜು ಮತ್ತು ಎಸ್.ಆರ್.ವಿಶ್ವನಾಥ್ ಗೈರಾಗಿದ್ದದ್ದು, ಪಕ್ಷದ ಒಡಕನ್ನು ಸಾರುವಂತಿತ್ತು.

ಈಗಾಗಲೇ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಜಿಲ್ಲಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಪಕ್ಷದ ನಿಯಮದಂತೆ ನಡೆದಿಲ್ಲ. ಕೋರ್ ಕಮಿಟಿಯ ಸದಸ್ಯರಾಗಲಿ, ರಾಜ್ಯಾಧ್ಯಕ್ಷರಾಗಲಿ ನಮ್ಮ ಅಭಿಪ್ರಾಯವನ್ನು ಕೇಳಿಲ್ಲ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿ.ಪಿ.ಹರೀಶ್ ಮತ್ತು ಕುಮಾರ್ ಬಂಗಾರಪ್ಪ ದೂರಿದ್ದರು. ಆದಾಗ್ಯೂ, ಶಿವಮೊಗ್ಗ ಜಿಲ್ಲೆಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.

ಅದೇ ರೀತಿ, ಡಾ. ಸುಧಾಕರ್ ಅವರು ವಿಜಯೇಂದ್ರ ಏಕಚಕ್ರಾಧಿಪತ್ಯದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಅಲ್ಲೂ ಕೂಡಾ (ಚಿಕ್ಕಬಳ್ಳಾಪುರ), ಜಿಲ್ಲಾಧ್ಯಕ್ಷರ ನೇಮಕ ಅವರ ಆಶಯಕ್ಕೆ ವಿರುದ್ದವಾಗಿ ಮಾಡಲಾಗಿದೆ. ಸಂಘಟನಾ ಪರ್ವ ಚಾಲನೆ ಪಡೆದ ಬಳಿಕ, ಯತ್ನಾಳ್ ಬಣದ ವಾಗ್ದಾಳಿ ಹೆಚ್ಚುತ್ತಿದೆ. ಇತ್ತೀಚೆಗೆ, ವಿಜಯೇಂದ್ರ ವಿರುದ್ದ ತಿರುಗಿ ಬೀಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಇತ್ತೀಚೆಗೆ ರಾಜ್ಯಾಧ್ಯಕ್ಷರ ವಿರುದ್ದ ಸೆಟೆದು ನಿಂತಿರುವ ಶ್ರೀರಾಮುಲು ಮತ್ತು ಡಾ.ಸುಧಾಕರ್, ಯತ್ನಾಳ್ ಬಣದ ಜೊತೆಗೆ ಕೈಜೋಡಿಸುತ್ತಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಬಹುತೇಕ, ಫೆಬ್ರವರಿ ಮೊದಲ ವಾರದಲ್ಲಿ ಅಧ್ಯಕ್ಷ ಹುದ್ದೆಗೆ ಯತ್ನಾಳ್ ಬಣ ತಮ್ಮ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ. ಸದ್ಯದ ಚಿತ್ರಣದ ಪ್ರಕಾರ, ಅವಿರೋಧವಾಗಿ ರಾಜ್ಯಾಧ್ಯಕ್ಷರ ಆಯ್ಕೆಯಾಗುವುದು ಸಾಧ್ಯವೇ ಇಲ್ಲದ ಮಾತಿನಂತಿದೆ.

ಬೆಂಗಳೂರು ಉತ್ತರ - ಎಸ್.ಹರೀಶ್, ಬೆಂಗಳೂರು ದಕ್ಷಿಣ - ಸಿ.ಕೆ.ರಾಮಮೂರ್ತಿ, ಬೆಂಗಳೂರು ಕೇಂದ್ರ - ಸಪ್ತಗಿರಿ ಗೌಡ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಮೂವರು, ವಿಜಯೇಂದ್ರ ಆಪ್ತರು. ಕ್ಯಾ. ಗಣೇಶ್ ಕಾರ್ಣಿಕ್ ನೇತೃತ್ವದ ಚುನಾವಣಾ ಸಮಿತಿ, 39 ಸಂಘಟನಾತ್ಮಕ ಜಿಲ್ಲೆಗಳ ಪೈಕಿ, 23 ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ.


"ಜಿಲ್ಲಾಧ್ಯಕ್ಷರ ಆಯ್ಕೆ ಏಕಪಕ್ಷೀಯವಲ್ಲ, ಯಾರದೋ ಮಾತನ್ನು ಕೇಳಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗದು. ರಾತ್ರಿ ಬೆಳಗಾಗುವಷ್ಟರಲ್ಲಿ ಈ ಪ್ರಕ್ರಿಯೆ ಮುಗಿದಿಲ್ಲ. ಇನ್ನೂ, 16 ಜಿಲ್ಲೆಗಳಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದುವರಿದಿದೆ" ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದ್ದಾರೆ. ಒಟ್ಟಿನಲ್ಲಿ, ಜಿಲ್ಲಾಧ್ಯಕ್ಷರ ಆಯ್ಕೆಯ ಬಗ್ಗೆ ಪಕ್ಷದಲ್ಲಿ ಅಪಸ್ವರ ಜೋರಾಗಿದೆ.

 

 

No Ads
No Reviews
No Ads

Popular News

No Post Categories
Sidebar Banner
Sidebar Banner