ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಕೊಲೆ ಪ್ರಕರಣದ ಸಂಬಂಧ ಅವರ ಪತ್ನಿ ಯಶಸ್ವಿನಿ (21) ಹಾಗೂ ಅತ್ತೆ ಹೇಮಾ ಬಾಯಿ (37) ಅವರನ್ನು ಸೋಲದೇವನಹಳ್ಳಿ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮಾಗಡಿ ತಾಲ್ಲೂಕಿನ ಕುದೂರು ನಿವಾಸಿ ಲೋಕನಾಥ್ ಸಿಂಗ್ ಅವರನ್ನು ನಗರದ ಬಿಜಿಎಸ್ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡದ ಬಳಿ ಕೊಲೆ ಮಾಡಲಾಗಿತ್ತು.
ಲೋಕನಾಥ್ ಅವರ ಸಹೋದರ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದ ಯಶಸ್ವಿನಿ ಪರಿಚಯವಾಗಿತ್ತು. ಕೆಲವು ದಿನಗಳ ಬಳಿಕ ಇಬ್ಬರೂ ಮೊಬೈಲ್ ಸಂಖ್ಯೆ ಬದಲಿಸಿಕೊಂಡಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಡಿಸೆಂಬರ್‌ನಲ್ಲಿ ಲೋಕನಾಥ್ ಅವರು ಯಶಸ್ವಿನಿಯನ್ನು ಕುಣಿಗಲ್‌ನ ನೋಂದಣಿ ಕಚೇರಿಗೆ ಕರೆದೊಯ್ದು ಮದುವೆ ಆಗಿದ್ದರು. ಕೆಲವು ದಿನ ಸಂಸಾರ ನಡೆಸಿ, ಆಕೆಯನ್ನು ತವರು ಮನೆಗೆ ವಾಪಸ್ ಕಳುಹಿಸಿದ್ದರು ಎಂದು ಪೊಲೀಸರು ಹೇಳಿದರು.
ಲೋಕನಾಥ್ ಸಿಂಗ್ ಬೇರೆ ಹುಡುಗಿಯ ಜೊತೆಗೆ ಓಡಾಟ ನಡೆಸುವುದು ಹೇಮಾ ಬಾಯಿ ಹಾಗೂ ಯಶಸ್ವಿನಿಗೆ ಗೊತ್ತಾಗಿತ್ತು. ಈ ಸಂಬಂಧ ದಂಪತಿ ಮದ್ಯೆ ಜಗಳವಾಗಿತ್ತು. ಲೋಕನಾಥ್ ಸಿಂಗ್ ಅತ್ತೆ ಹಾಗೂ ಪತ್ನಿಗೆ ಬೆದರಿಕೆ ಹಾಕಿದ್ದರು. ಬೆದರಿಕೆ ಹಾಕಿದ ಮೇಲೆ ಇಬ್ಬರೂ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದರು. ಮಾರ್ಚ್ 23ರಂದು ಬೆಳಿಗ್ಗೆ ಯಶಸ್ವಿನಿ, ಪತಿ ಲೋಕನಾಥ್ ಸಿಂಗ್‌ಗೆ ಕರೆ ಮಾಡಿ, ಬರುವಂತೆ ಕೇಳಿಕೊಂಡಿದ್ದಳು.
ಕಾರಿನಲ್ಲಿ ಲೋಕನಾಥ್ ಬಂದಿದ್ದರು. ಚಿಕ್ಕಬಾಣಾವರದ ಬಳಿ ಪತ್ನಿ ಯಶಸ್ವಿನಿಯನ್ನು ಕಾರಿಗೆ ಹತ್ತಿಸಿಕೊಂಡಿದ್ದರು. ಪತ್ನಿಯ ಸೂಚನೆಯಂತೆ ಬಿಳಿಜಾಜಿಯ ಬಿಜಿಎಸ್ ಲೇಔಟ್‌ನ ನಿರ್ಜನ ಪ್ರದೇಶಕ್ಕೆ ತೆರಳಿದ್ದರು. ಮನೆಯಿಂದಲೇ ಸಿದ್ಧಪಡಿಸಿಕೊಂಡು ಬಂದಿದ್ದ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದ ಯಶಸ್ವಿನಿ, ಪತಿಗೆ ಊಟ ಮಾಡಿಸಿದ್ದಳು ಎಂದು ಪೊಲೀಸರು ಹೇಳಿದರು.
ಪುತ್ರಿಯನ್ನು ಕಾರಿನಲ್ಲಿ ಕಳುಹಿಸಿ ಹಿಂದಿನಿಂದ ಆಟೊದಲ್ಲಿ ಹೇಮಾ ಬಂದಿದ್ದಳು. ಬಿಜಿಎಸ್ ಲೇಔಟ್‌ನಲ್ಲಿ ಕಾರು ನಿಲ್ಲಿಸಿಕೊಂಡು ಲೋಕನಾಥ್ ಪತ್ನಿ ಜತೆ ಮಾತನಾಡುತ್ತಿದ್ದ ನಿಂತಿದ್ದರು. ಆಗ ದಿಢೀರ್ ದಾಳಿಮಾಡಿದ ಹೇಮಾ ಅಳಿಯನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಳು. ನಂತರ ಚಾಕು ಕಸಿದುಕೊಂಡು ಯಶಸ್ವಿನಿ ಸಹ ಇರಿದಿದ್ದಳು ಎಂದು ಮೂಲಗಳು ತಿಳಿಸಿವೆ.
ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆ ಮೊಬೈಲ್ ನೆಟ್‌ವರ್ಕ್ ಹಾಗೂ ಲೋಕನಾಥ್ ಸಿಂಗ್‌ನ ಅಂಗರಕ್ಷಕನ ಹೇಳಿಕೆಯಲ್ಲಿ ಕೆಲವೊಂದು ಮಾಹಿತಿಗಳು ದೊರೆಕಿದ್ದವು. ಅದನ್ನು ಆಧರಿಸಿ ತನಿಖೆ ನಡೆಸಿದಾಗ ಯಶಸ್ವಿನಿ ಮೇಲೆ ಅನುಮಾನ ಹೆಚ್ಚಾಗಿತ್ತು.
Log in to write reviews