ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಬಹುಕೋಟಿ ಬಿಟ್ ಕಾಯಿನ್ ಹಗರಣ (Bitcoin case) ಸಂಬಂಧ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹ್ಮದ್ ನಲಪಾಡ್ಗೆ (Mohammed Nalapad) ಸಂಕಷ್ಟ ಎದುರಾಗಿದೆ.
ಎಸ್ಐಟಿ ಅಧಿಕಾರಿಗಳು ಎರಡನೇ ಬಾರಿಗೆ ನೋಟಿಸ್ ನೀಡಿದ್ದು ಫೆಬ್ರವರಿ 7 ರಂದು (ನಾಳೆ) ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಆದರೆ ನಲಪಾಡ್ ತಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದಿದ್ದಾರೆ. ಈ ನಡುವೆ ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ದಿಢೀರ್ ಭೇಟಿಯಾಗಿರೋದು ಕುತೂಹಲ ಮೂಡಿಸಿದೆ.
ಎಸ್ಐಟಿ ವಿಚಾರಣೆಗೆ ಹಾಜರಾಗುವ ಮುನ್ನ ಡಿಸಿಎಂ ಅವರನ್ನು ಭೇಟಿಯಾಗಿದ್ದಾರೆ. ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆಶಿ ನಿವಾಸಕ್ಕೆ ತೆರಳಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಿಟ್ ಕಾಯಿನ್ ಹಗರಣ ಸಂಬಂಧ ಹ್ಯಾಕರ್ ಶ್ರೀಕಿಯನ್ನು ಎಸ್ಐಟಿ ಬಂಧಿಸಿ ವಿಚಾರಣೆ ನಡೆಸಿತ್ತು. ಹ್ಯಾಕರ್ ಶ್ರೀಕಿ ಜೊತೆ ಮಹಮ್ಮದ್ ನಲಪಾಡ್ ನಂಟು ಹೊಂದಿರುವ ಶಂಕೆ ಇದೆ. ಶ್ರೀಕಿಯಿಂದ ಕೋಟ್ಯಾಂತರ ರೂಪಾಯಿ ಪಡೆದುಕೊಂಡಿದ್ದಾರೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.
ನಲಪಾಡ್ ನೋಟಿಸ್ ಸಂಬಂಧ ಪ್ರತಿಕ್ರಿಯಿಸಿರೋ ಗೃಹ ಸಚಿವ ಪರಮೇಶ್ವರ್, ನೋಟಿಸ್ ನೀಡುವುದು ತನಿಖೆಯ ಒಂದು ಭಾಗ. ಅಧಿಕಾರಿಗಳು ಯಾರನ್ನು ಕರೆದು ಹೇಳಿಕೆ ದಾಖಲಿಸಬೇಕೋ ಆ ಪ್ರಕ್ರಿಯೆ ಮಾಡುತ್ತಿದ್ದಾರೆ. ಯಾವ ರೀತಿ
ವ್ಯವಹಾರ ಇದೆ ಅನ್ನೊದು ಪೊಲೀಸರು ಪತ್ತೆ ಮಾಡ್ತಾರೆ ಎಂದಿದ್ದಾರೆ.
Log in to write reviews