ಕಾಲೇಜಿಗೆ ಪಾಠ ಕಲಿಯಲು ಹೋದವಳಿಗೆ ಲೆಕ್ಚರರ್‌ರೊಬ್ಬ ಪ್ರೇಮಪಾಠ ಹೇಳಿಕೊಟ್ಟು, ಆಕೆಯೊಂದಿಗೆ ಪರಾರಿಯಾಗಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಮಹಾವೀರ್ ಕಾಲೇಜ್ ಆಫ್ ಎಜ್ಯುಕೇಶನ್ ನಲ್ಲಿ ಬಿಎಡ್ ವ್ಯಾಸಂಗ ಮಾಡುತ್ತಿದ್ದ 24 ವರ್ಷದ ವಿದ್ಯಾರ್ಥಿನಿಯೊಂದಿಗೆ 39 ವರ್ಷದ ಲೆಕ್ಚರರ್ ಪರಾರಿಯಾಗಿದ್ದಾನೆ.
ಲೆಕ್ಚರರ್ ಯಶೋದ್ ಕುಮಾರ್ ತನಗಿಂತ 15 ವರ್ಷದ ಕಿರಿಯ ಯುವತಿಯ ಜೊತೆ ಪ್ರೀತಿ-ಪ್ರೇಮ ಶುರು ಮಾಡಿ, ಆಕೆಯೊಂದಿಗೆ ಪರಾರಿಯಾಗಿದ್ದಾನೆ. ಇಬ್ಬರ ಪ್ರೇಮಪುರಾಣ ಹುಡುಗಿ ಮನೆಯವರಿಗೆ ತಿಳಿದಾಗ ಲೆಕ್ಚರರ್ ಸಹವಾಸ ಬಿಟ್ಟುಬಿಡು ಎಂದು ಪೋಷಕರು ಅಂಗಲಾಚಿದ್ದರು. ಆಕೆಯನ್ನು ಹೊರಗೂ ಬಿಡದೇ ಮನೆಯಲ್ಲಿಯೇ ಇರಿಸಿಕೊಂಡಿದ್ದರು. ಆದರೆ ಡಿ.26 ರಂದು ಯುವತಿಯು ಸರ್ಟಿಫಿಕೇಟ್ ತರುವುದಾಗಿ ಹೇಳಿ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.
ಯುವತಿಯ ಕುಟುಂಬದವರು ಬೀದಿಬದಿ ಸೊಪ್ಪು ಮಾರಿ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಕಷ್ಟದ ಬದುಕಿನಲ್ಲೂ ಪೋಷಕರು ಮಗಳ ವಿದ್ಯಾಭ್ಯಾಸಕ್ಕಾಗಿ ಎರಡು ಲಕ್ಷ ಸಾಲಮಾಡಿಕೊಂಡಿದ್ದಾರೆ. ಆದರೆ, ಮಗಳು ಲೆಕ್ಚರರ್ ಜೊತೆ ಪ್ರೀತಿ-ಪ್ರೇಮ ಎಂದು ಮನೆ ಬಿಟ್ಟು ಹೋಗಿದ್ದಾಲೆ. ಇದರಿಂದ ಬೇಸರಗೊಂಡು ತಂದೆ ಹಾಸಿಗೆ ಹಿಡಿದಿದ್ದಾರೆ
ನಮಗೆ ತೊಂದರೆ ಕೊಡಬೇಡಿ ನಾವು ಮದುವೆ ಆಗಿದ್ದೀವಿ ಎಂದು ಯುವತಿ ತನ್ನ ಪೋಷಕರಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿದ್ದಾಳೆ. ಇದರಮಧ್ಯ ಪೋಷಕರು ಕಂಗಾಲಾಗಿದ್ದು, ಈ ಬಗ್ಗೆ ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Log in to write reviews