ಮುಂಬೈ: ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಗಾಯಕ ಉದಿತ್ ನಾರಾಯಣ್ ಅವರು ಮಹಿಳಾ ಅಭಿಮಾನಿಯೊಬ್ಬರಿಗೆ ಚುಂಬಿಸುತ್ತಿರುವ (ಲಿಪ್ ಕಿಸ್) ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ತಮ್ಮನ್ನು ಪ್ರೀತಿಯಿಂದ ಮಾತನಾಡಿಸಿದ ಅಭಿಮಾನಿಯ ತುಟಿಗಳನ್ನು ಚುಂಬಿಸುವುದು ಎಷ್ಟರ ಮಟ್ಟಿಗೆ ಸರಿ?, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಉದಿತ್ ನಾರಾಯಣ್ ಅವರು ಹೀಗೆ ಮಾಡಬಹುದೇ ಎಂದು ಹಲವರು ಪ್ರಶ್ನಿಸಿದ್ದಾರೆ.
ಈ ಕುರಿತಂತೆ 'ಹಿಂದೂಸ್ಥಾನ್ ಟೈಮ್ಸ್' ಸಂದರ್ಶನದಲ್ಲಿ ಮಾತನಾಡಿರುವ 69 ವರ್ಷದ ಉದಿತ್ ನಾರಾಯಣ್, 'ಇದು ನನ್ನ ಹಾಗೂ ನನ್ನ ಅಭಿಮಾನಿಯ ಪ್ರೀತಿಯ ನಡುವೆ ನಡೆದ ಸಹಜ ಘಟನೆಯಾಗಿದೆ. ಇದನ್ನು ವಿವಾದಕ್ಕೀಡು ಮಾಡುವುದು ಸರಿಯಲ್ಲ' ಎಂದು ಹೇಳುವ ಮೂಲಕ ಮಹಿಳಾ ಅಭಿಮಾನಿಯೊಬ್ಬರ ತುಟಿಗೆ ಮುತ್ತು ಕೊಟ್ಟಿರುವುದನ್ನು ಅವರು
ಸಮರ್ಥಿಸಿಕೊಂಡಿದ್ದಾರೆ.
'ಇದು ಅಭಿಮಾನಿಗೆ ನಾನು ತೋರಿಸಿರುವ ಪ್ರೀತಿ ಅಷ್ಟೆ'. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಪ್ರೀತಿಯಿಂದ ಮಾತನಾಡಿಸಿದವರಿಗೆ ಮುತ್ತು ಕೊಟ್ಟಿದ್ದು ನಾನೇ ಮೊದಲಲ್ಲ. ಈ ಹಿಂದೆ ಅನೇಕ ಸೆಲೆಬ್ರಿಟಿಗಳು ಹೀಗೆ ನಡೆದುಕೊಂಡಿದ್ದಾರೆ. ಅವರಂತೆಯೇ ನಾನೂ ನಡೆದುಕೊಂಡಿದ್ದೇನೆ ಅಷ್ಟೆ' ಎಂದು ಹೇಳಿದ್ದಾರೆ.
'ನಾನು ವೇದಿಕೆ ಮೇಲೆ ಹಾಡುವಾಗ ಅಭಿಮಾನಿಗಳು ನನ್ನನ್ನು ಪ್ರೀತಿಸುತ್ತಾರೆ. ಅಭಿಮಾನಿಗಳು ಸಂತೋಷವಾಗಿರಲಿ ಎಂದು ನಾನು ಭಾವಿಸುತ್ತೇನೆ. ಅವರನ್ನೂ ಸಂತೋಷಪಡಿಸುವುದಷ್ಟೇ ನನ್ನ ಉದ್ದೇಶ' ಎಂದು ಅವರು ತಿಳಿಸಿದ್ದಾರೆ.
'ಅಭಿಮಾನಿಗಳು ನನ್ನನ್ನು ಭೇಟಿಯಾಗಲು ಬಯಸುತ್ತಾರೆ. ಕೆಲವರು ಹ್ಯಾಂಡ್‌ಶೇಕ್‌ಗಾಗಿ ತಮ್ಮ ಕೈಗಳನ್ನು ಚಾಚುತ್ತಾರೆ. ಇನ್ನು ಕೆಲವರು ನನ್ನ ಕೈಗಳನ್ನು ಚುಂಬಿಸುತ್ತಾರೆ. ಇದೆಲ್ಲ ಕೇವಲ ಗೀಳು. ಇದರ ಬಗ್ಗೆ ಹೆಚ್ಚು ಗಮನ ಹರಿಸಬಾರದು' ಎಂದು ಹೇಳಿದ್ದಾರೆ.
'ನನ್ನ ಹಾಗೂ ನನ್ನ ಅಭಿಮಾನಿಗಳ ನಡುವಿನ ಪ್ರೀತಿಯು ಯಾವತ್ತೂ ಪರಿಶುದ್ಧವಾಗಿರುತ್ತದೆ. ಅದು ಎಂದೆಂದಿಗೂ ಶಾಶ್ವತವಾಗಿ ಉಳಿದಿರುತ್ತದೆ. ಆದರೆ, ಈ ಘಟನೆ ಕುರಿತಂತೆ ಅನಗತ್ಯವಾಗಿ ವಿವಾದವನ್ನು ಸೃಷ್ಟಿಸಲಾಗುತ್ತಿದೆ. ಆ ಮೂಲಕ ನನ್ನ ಸಾಧನೆ, ಗೌರವಕ್ಕೆ ಧಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ' ಎಂದು ಅವರು ಕಿಡಿಕಾರಿದ್ದಾರೆ.
Log in to write reviews