ಕಳೆದ ವರ್ಷ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ವಿವಾದಕ್ಕೆ ಒಳಗಾಗಿದ್ದ ಸಿನಿಮಾ ಎಂದರೆ ಅದು ‘ದಿ ಕೇರಳ ಸ್ಟೋರಿ’. ಇದೀಗ ಈ ಸಿನಿಮಾ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದೆ. ನಟಿ ಅದಾ ಶರ್ಮಾ ನಟನೆಯ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಏಪ್ರಿಲ್ 5ರಂದು ರಾತ್ರಿ 8 ಗಂಟೆಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದೆ. ಆದರೆ ಈ ಸಿನಿಮಾವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಬಾರದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ದೂರದರ್ಶನವು ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಏಪ್ರಿಲ್ 5ರಂದು ಪ್ರಸಾರ ಮಾಡುವುದಾಗಿ ತಿಳಿಸಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೇರಳ ಸಿಎಂ 2024 ಲೋಕಸಭಾ ಚುನಾವಣೆ ನಡೆಯುತ್ತಿರುವ ಹೊತ್ತಲ್ಲಿ ಕೋಮುಭಾವನೆಯನ್ನು ಕೆರಳಿಸುವ ಸಾಧ್ಯತೆ ಇದೆ. ಹೀಗಾಗಿ ದೂರದರ್ಶನ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ದೂರದರ್ಶನವು ಬಿಜೆಪಿ ಮತ್ತು ಆರ್ಎಸ್ಎಸ್ನ ಪ್ರಚಾರ ಮಾಡುವ ಯಂತ್ರ ಆಗಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಡಿಡಿ ರಾಷ್ಟ್ರೀಯ ವಾಹಿನಿಯಲ್ಲಿ ಸಮಾಜದ ಧ್ರುವೀಕರಣವನ್ನು ಪ್ರಚೋದಿಸುವ ಕೇರಳ ಸ್ಟೋರಿಯನ್ನು ಪ್ರಸಾರ ಮಾಡಲು ಹೊರಟಿರುವುದು ತೀವ್ರ ಖಂಡನೀಯ ಅಂಶವಾಗಿದೆ. ರಾಷ್ಟ್ರೀಯ ವಾಹಿನಿ ಬಿಜೆಪಿ ಮತ್ತು ಆರ್ಎಸ್ಎಸ್ನ ಪ್ರಚಾರದ ಯಂತ್ರದಂತೆ ಕೆಲಸ ಮಾಡುವುದು ಒಳ್ಳೆಯದಲ್ಲ. ಹೀಗಾಗಿ ಈ ಸಿನಿಮಾವನ್ನು ಪ್ರಸಾರ ಮಾಡುವ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಬರೆದುಕೊಂಡಿದ್ದಾರೆ.
ದೂರದರ್ಶನದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರಸಾರಕ್ಕೆ ಕೇರಳ ಸಿಎಂ ಪಿಣರಾಯಿ ವಿರೋಧ
No Ads
Log in to write reviews