ಮಾರ್ಚ್ 22ರಂದು ಕರ್ನಾಟಕ ಬಂದ್ ಫಿಕ್ಸ್ ಆಗಿದೆ. ಬೆಳಗಾವಿಯಲ್ಲಿ ಮರಾಠಿ ಪುಂಡರ ದಬ್ಬಾಳಿಕೆ ವಿರುದ್ಧ ಕನ್ನಡ ಪರ ಸಂಘಟನೆಗಳು ಇದೇ ಶನಿವಾರ ಅಂದ್ರೆ ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಸಂಬಂಧ ಇಂದು ಬೆಂಗಳೂರಿನಲ್ಲಿ ‘ಅಖಂಡ ಕರ್ನಾಟಕ ಬಂದ್’ಗೆ ಕುರಿತು ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ ಮಾಡಲು ತೀರ್ಮಾನವಾಗಿದೆ.
ಕರ್ನಾಟಕದ ಸಾರಿಗೆ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮತ್ತು ಚಾಲಕರ ಮುಖಕ್ಕೆ ಮರಾಠಿ ಪುಂಡರು ಮಸಿ ಬಳಿದಿದ್ದರು. ಅಷ್ಟೇ ಅಲ್ಲದೆ, ಹಲ್ಲೆಯನ್ನೂ ಸಹ ನಡೆಸಿದ್ದರು. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ತಡೆಯಲು ಸರ್ಕಾರದ ಮೇಲೆ ಒತ್ತಡ ಹಾಕಲು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಬಂದ್‌ಗೆ ಯಾರ್ ಯಾರು ಬೆಂಬಲಿಸಿದ್ದಾರೆ?
KSRTC, ಬಿಎಂಟಿಸಿ ನೌಕರರ ಸಂಘ ಬೆಂಬಲ
ಇನ್ನು ಮಾರ್ಚ್ 22ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಸಾರಿಗೆ ನೌಕರರ ಕೂಟ ಸಹ ಬೆಂಬಲಿಸಿದೆ. ಈ ಬಗ್ಗೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು ಪ್ರತಿಕ್ರಿಯಿಸಿ, ಬಂದ್‌ಗೆ KSRTC, ಬಿಎಂಟಿಸಿ ನೌಕರರ ಸಂಘದಿಂದ ಬೆಂಬಲ ಇದೆ. ಕಳೆದ ತಿಂಗಳು ಸಾರಿಗೆ ನೌಕರನ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಖಂಡಿಸಿದ ಕನ್ನಡಪರ ಹೋರಾಟಗಾರರಿಗೆ ಸದಾ ಚಿರಋಣಿ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು ನಿಮ್ಮ ಜೊತೆ ಇದ್ದೇವೆ. ಕರ್ನಾಟಕ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು. ಆದ್ರೆ ಮೆಟ್ರೋ ಬಂದ್ ಕುರಿತು ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಆದರೂ ಸಹ ಅಂದು ಏನಾದರೂ ಪ್ರಯಾಣ ಮಾಡುವ ಪ್ಲ್ಯಾನ್ ಇದ್ದರೆ ಯಾವುದಕ್ಕೂ ಮುಂದೂಡುವುದು ಒಳಿತು.
ಶಿವರಾಮೇಗೌಡ ಬಣ ಬೆಂಬಲ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕನ್ನಡ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಸಹ ಬೆಂಬಲಿಸಿದೆ. ಈ ಬಗ್ಗೆ ಸ್ವತಃ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ ಸ್ಪಷ್ಟಪಡಿಸಿದ್ದಾರೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ನಾಡಿನ ಹಿತಕ್ಕಾಗಿ ಬಂದ್‌ಗೆ ಕರೆ ನೀಡಲಾಗಿದೆ. ಸರ್ವ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದೇವೆ. ಮೆಟ್ರೋದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಆಗುತ್ತಿದೆ. ಶಿವಸೇನೆ ನಿಷೇಧ ಸೇರಿ ಅನೇಕ ವಿಚಾರ ಮುಂದಿಟ್ಟು ಬಂದ್‌ಗೆ ಕರೆ ನೀಡಲಾಗಿದೆ. ಚಾಲಕರು ಸೇರಿ ಎಲ್ಲರೂ ಈ ಬಂದ್ ಅನ್ನು ಯಶಸ್ವಿಗೊಳಿಸಬೇಕು. ಆಸ್ಪತ್ರೆ, ಹಾಲು ಸೇರಿ ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಎಂದು ತಿಳಿಸಿದರು.
ಹೋಟೆಲ್ ನವರು ಈ ಬಂದ್ ಗೆ ಬೆಂಬಲ ಕೊಡಬೇಕು ಎಂದು ಕಾರ್ಮಿಕ ಸಂಘಟನೆಯ ರವಿ ಬೈಂದೂರು ಮನವಿ ಮಾಡಿದ್ದಾರೆ. ಒಂದು ವೇಳೆ ಹೋಟೆಲ್ ನವರು ಬಂದ್ ಗೆ ಬೆಂಬಲ ಕೊಡಲಿಲ್ಲ ಅಂದರೆ ನಾವು ನಿಮ್ಮ ಹೋರಾಟಕ್ಕೆ ಕೈ ಜೋಡಿಸಲ್ಲ. ನಮಗೆ ನಿಮ್ಮ ನೈತಿಕ ಬೆಂಬಲ ಬೇಡ, ಪೂರ್ಣ ಬೆಂಬಲ ಬೇಕು ಎಂದಿದ್ದಾರೆ. ಆದ್ರೆ, ಹೋಟೆಲ್ ಮಾಲೀಕರ ಸಂಘ ಮಾತ್ರ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.
Log in to write reviews