ಜಾರಿ ನಿರ್ದೇಶನಾಲಯದ (ED) ಹೆಸರಿನಲ್ಲಿ ಉದ್ಯಮಿ ಮನೆ ಮೇಲೆ ದಾಳಿ ಮಾಡಿದ ಖದೀಮರು 30 ಲಕ್ಷ ರೂ. ಕದ್ದು ಪರಾರಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಘಟನೆ ನಡೆದಿದೆ.
ಸುಲೈಮಾನ್ ಹಾಜಿ ಎಂಬುವರು ಸಿಂಗಾರಿ ಬೀಡಿ ಎಂಬ ಹೆಸರಿನ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ತಡರಾತ್ರಿ ತಮಿಳುನಾಡು ಮೂಲದ ಖದೀಮರ ತಂಡ ಸುಲೈಮಾನ್ ಹಾಜಿ ಅವರ ಮನೆಗೆ ಕಾರ್ನಲ್ಲಿ ಆಗಮಿಸಿದೆ. ನಾವು ಇಡಿ ಅಧಿಕಾರಿಗಳು ಎಂದು ಸುಲೈಮಾನ್ ಹಾಜಿ ಅವರನ್ನು ನಂಬಿಸಿ ಸುಮಾರು ಎರಡು ಗಂಟೆಗಳವರೆಗೆ ಮನೆಯಲ್ಲ ಪರಿಶೀಲಿಸಿದ್ದಾರೆ. ಕೊನೆಗೆ ಮನೆಯಲ್ಲಿದ್ದ ಸುಮಾರು 30 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ.
ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.
ವೃದ್ದ ದಂಪತಿ ಇದ್ದ ತೋಟದ ಮನೆಗೆ ನುಗ್ಗಿ ದರೋಡೆ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ದೊಡ್ಡಮಧುರೆ ಗ್ರಾಮದಲ್ಲಿ ನಡೆದಿದೆ. ವೃದ್ದ ದಂಪತಿಗಳಿದ್ದ ತೋಟದ ಮನೆಯನ್ನು ಟಾರ್ಗೆಟ್ ಮಾಡಿತ್ತು. ಮೊಲ ಹಿಡಿಯುವ ನೆಪದಲ್ಲಿ ಕಳ್ಳರ ಗ್ಯಾಂಗ್ ಶುಕ್ರವಾರ ತೋಟಕ್ಕೆ ಬಂದಿತ್ತು. ರಾತ್ರಿ ನಿವಾಸದೊಳಗೆ ನುಗ್ಗಿದೆ.
ಮನೆಯಲ್ಲಿದ್ದ ಚನ್ನೇಗೌಡ (75) ಅವರ ಮೇಲೆ ಹಲ್ಲೆ ಮಾಡಿ, ಬಳಿಕ ಒಡವೆ, ಮೊಬೈಲ್, ಹಣ ದೋಚಿ ದರೋಡೆಕೂರರು ಪರಾರಿಯಾಗಿದ್ದಾರೆ. ದರೋಡೆಕೋರರು ಸುಮಾರು ಎರಡು ಲಕ್ಷ ಮೌಲ್ಯದ ಒಡವೆ ಮತ್ತು ಹಣ ದೋಚಿರುವ ಶಂಕೆ ವ್ಯಕ್ತವಾಗಿದೆ.
ಗಾಯಗೊಂಡ ಚನ್ನೆಗೌಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದರೋಡೆ ಸುದ್ದಿ ತಿಳಿದು ದೊಡ್ಡಮಧುರೆ ಗ್ರಾಮದ ಜನರಲ್ಲಿ ಆತಂಕ ಮೂಡಿದೆ. ಘಟನಾ ಸ್ಥಳಕ್ಕೆ ಅಮೃತೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Log in to write reviews