No Ads

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸದಿದ್ದಲ್ಲಿ ಜ. 4ರಂದು ಪ್ರತಿಭಟನೆ: ಬಿವೈ ವಿಜಯೇಂದ್ರ ಎಚ್ಚರಿಕೆ

ಕರ್ನಾಟಕ 2024-12-30 15:29:00 68
post

ಬೆಂಗಳೂರು: ಆರ್‌ಡಿಪಿಆರ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಭಾಗಿಯಾಗಿದ್ದಾರೆ ಎನ್ನಲಾದ ಬೀದರ್ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಬೇಕು. ಇಲ್ಲವಾದಲ್ಲಿ ಜನವರಿ 4ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ಕೈಗೊಂಡರೆ ದೆಹಲಿಯಿಂದ ನಿಮಗೆ ಕರೆ ಬರುತ್ತದೆ ಮತ್ತು ನಿಮ್ಮ ಖುರ್ಚಿಗೆ ಕುತ್ತು ಬರುತ್ತದೆ ಎಂದು ಹೆದರಬೇಡಿ. ಯಾವುದಕ್ಕೂ ಹೆದರಬೇಡಿ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳಿ. ಹಿಂದುಳಿದ ವರ್ಗಗಳ ಚಾಂಪಿಯನ್ ಆಗಿರುವುದಾಗಿ ನೀವೆ ಹೇಳಿಕೊಂಡಿದ್ದೀರಿ. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ' ಎಂದರು.

'ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಮತ್ತು ಬಿಜೆಪಿ ನಾಯಕರನ್ನು ಹತ್ಯೆ ಮಾಡಲು ಮಹಾರಾಷ್ಟ್ರದ ಸೋಲಾಪುರದ ಹಂತಕರನ್ನು ನೇಮಿಸಲಾಗಿದೆ ಎಂದು ಗುತ್ತಿಗೆದಾರ ಸಚಿನ್ ತಮ್ಮ ಡೆತ್ ನೋಟ್‌ನಲ್ಲಿ ತಿಳಿಸಿದ್ದಾರೆ. ಇದು ಗಂಭೀರ ವಿಷಯವಾಗಿದ್ದು, ಬಿಜೆಪಿ ಜನವರಿ 3ರವರೆಗೆ ಕಾಯಲಿದೆ. ಪ್ರಕರಣವನ್ನು ಸಿಬಿಐಗೆ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇವರು ಬುದ್ಧಿ ನೀಡಲಿ' ಎಂದು ಹೇಳಿದರು.

 

'ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಈಗಿನಂತೆ ಹಿಂದೆಂದೂ ಆಗಿರಲಿಲ್ಲ. ಮೃತ ಗುತ್ತಿಗೆದಾರನ ಸಹೋದರಿಯರು ಸಹಾಯ ಕೋರಿ ಪೊಲೀಸರ ಮೊರೆ ಹೋಗಿದ್ದರು. ಆದರೆ, ಪೊಲೀಸರು ಅವರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬದಲಾಗಿ ಪೊಲೀಸರು ಅವರನ್ನು ಅವಮಾನಿಸಿದ್ದಾರೆ. ಪೊಲೀಸರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ. ಅವರು ಕ್ರಮ ಕೈಗೊಂಡಿದ್ದಿದ್ದರೆ ಗುತ್ತಿಗೆದಾರನ ಜೀವ ಉಳಿಸಬಹುದಿತ್ತು' ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

'ಸಂತ್ರಸ್ತನಿಗೆ ಬೆದರಿಕೆ ಹಾಕಿರುವ ಆರೋಪಿ ರಾಜು ಕಾಪನೂರ ಪ್ರಿಯಾಂಕ್ ಖರ್ಗೆ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ. ಆರೋಪಿ ಸಾಮಾನ್ಯ ವ್ಯಕ್ತಿಯಲ್ಲ ಮತ್ತು ಹೆಚ್ಚು ಪ್ರಭಾವಶಾಲಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು' ಎಂದು ಒತ್ತಾಯಿಸಿದ ಅವರು, ರಾಜು ಕಾಪನೂರ ಅವರು ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇರುವ ಫೋಟೊಗಳನ್ನು ಬಿಡುಗಡೆ ಮಾಡಿದರು.

ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬುದು ಮೃತ ಸಚಿನ್ ಕುಟುಂಬದವರ ಬೇಡಿಕೆಯಾಗಿದೆ. ಈ ಹಿಂದೆ ಬಿಜೆಪಿಯ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು. ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಉಪ ಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸಚಿವ ಕೆಜೆ ಜಾರ್ಜ್ ರಾಜೀನಾಮೆ ಸಲ್ಲಿಸಿದ್ದರು ಎಂದು ಅವರು ಒತ್ತಿ ಹೇಳಿದರು.

ಸರ್ಕಾರ ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದು, ಮೃತ ಗುತ್ತಿಗೆದಾರರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

 

 

No Ads
No Reviews
No Ads

Popular News

No Post Categories
Sidebar Banner
Sidebar Banner