No Ads

ತನಗೆ ಕ್ಯಾನ್ಸರ್ ಇದೆ ಅಂತ ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ

India 2025-04-17 12:52:27 539
post

ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಸಮೀಪದ ಗಾಜಿಯಾಬಾದ್‌ನ ರಿಯಲ್ ಎಸ್ಟೇಟ್ ಉದ್ಯಮಿಯೋರ್ವ, ತನಗೆ ಕ್ಯಾನ್ಸರ್‌ ಇದೆ ಎಂದು ತಿಳಿಯುತ್ತಿದ್ದಂತೇ, ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗಾಜಿಯಾಬಾದ್‌ನ ಕುಲ್ದೀಪ್ ತ್ಯಾಗಿ (46) "ನನಗೆ
ಕ್ಯಾನ್ಸರ್ ಇದ್ದು, ಇದರ ಚಿಕಿತ್ಸೆಗೆ ಅನಗತ್ಯವಾಗಿ ಹಣ ಖರ್ಚು ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದೇನೆ" ಡೆತ್‌ ನೋಟ್‌ನಲ್ಲಿ ತಿಳಿಸಿದ್ದಾರೆ. ಪತ್ನಿಯನ್ನು ಕೊಂದ ಪತಿಯ ಸುದ್ದಿ ಗಾಜಿಯಾಬಾದ್‌ ನಗರವನ್ನು ತಲ್ಲಣಗೊಳಿಸಿದೆ.

"ಕ್ಯಾನ್ಸರ್ ಚಿಕಿತ್ಸೆಗೆ‌ ಅನಗತ್ಯ ಹಣ ವ್ಯಯಿಸುವುದು ಬೇಡ. ನಾನು ಗುಣಮುಖನಾಗುವ ಬಗ್ಗೆ ಖಚಿತವಿಲ್ಲ. ಹೀಗಾಗಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ" ಎಂದು ಕುಲ್ದೀಪ್ ತ್ಯಾಗಿ ಬರೆದಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. "ನಾನು ಬದುಕು ಮತ್ತು ಸಾವಿನಲ್ಲಿ ಒಟ್ಟಿಗೆ ಇರುವುದಾಗಿ ಪತ್ನಿ ಅಂಶು ತ್ಯಾಗಿಗೆ ಪ್ರಮಾಣ ಮಾಡಿದ್ದೆ. ಆದರೀಗ ನಾನು ಸಾಯುವ ತೀರ್ಮಾನ ಮಾಡಿದ್ದೇನೆ. ಹೀಗಾಗಿ ಆಕೆಯನ್ನೂ ಅನಿವಾರ್ಯವಾಗಿ ಕೊಲೆ ಮಾಡಬೇಕಿದೆ" ಎಂಬ ಕುಲ್ದೀಪ್ ತ್ಯಾಗಿ ಅರ ಡೆತ್‌ನೋಟ್‌ ಎಂತಹವರನ್ನೂ ಒಂದು ಕ್ಷಣ ಬೆಚ್ಚಿ ಬೀಳಿಸದೇ ಇರದು.

"ನಿನ್ನೆ (ಏ.16-ಬುಧವಾರ) ಬೆಳಗ್ಗೆ 11 ಗಂಟೆ ಸುಮಾರಿಗೆ ಗಾಜಿಯಾಬಾದ್‌ನ ರಾಜನಗರದ ರಾಧಾ ಕುಂಜ್ ಸೊಸೈಟಿಯ ಮನೆಯಲ್ಲಿ, ಕುಲ್ದೀಪ್ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ ಪತ್ನಿ ಅಂಶು ತ್ಯಾಗಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ನಂತರ ಅವರೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ನಡೆದಾಗ ತ್ಯಾಗಿ ದಂಪತಿಯ ಇಬ್ಬರು ಗಂಡು ಮಕ್ಕಳು ಮನೆಯಲ್ಲೇ ಇದ್ದರು. ಗುಂಡಿನ ಸದ್ದು ಕೇಳುತ್ತಿದ್ದಂತೇ ಪೋಷಕರ ಕೋಣೆಗೆ ಧಾವಿಸಿ ಬಂದ ಮಕ್ಕಳು, ಕುಲ್ದೀಪ್ ಅವರ ದೇಹ ನೆಲದ ಮೇಲೆ ಮತ್ತು ಅಂಶು ಅವರ ದೇಹ ಹಾಸಿಗೆಯ ಮೇಲೆ ಬಿದ್ದಿದ್ದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಸಾಗಿಸಿದರಾದರೂ, ವೈದ್ಯರು ಇಬ್ಬರೂ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಮೂಲಗಳು ಖಚಿತಪಡಿಸಿವೆ. ಈ ಭೀಕರ ಘಟನೆ ಮಕ್ಕಳನ್ನು ಬೆಚ್ಚಿ ಬೀಳಿಸಿದೆ.

ತ್ಯಾಗಿ ದಂಪತಿಯ ಕೋಣೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು, "ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ನನ್ನ ಕುಟುಂಬಕ್ಕೆ ಇದರ ಬಗ್ಗೆ ತಿಳಿದಿಲ್ಲ. ಬದುಕುವುದು ಖಚಿತವಿಲ್ಲದ ಕಾರಣ ನನ್ನ ಚಿಕಿತ್ಸೆಗೆ ಹಣ ವ್ಯಯಿಸಲು ನಾನು ಬಯಸುವುದಿಲ್ಲ. ನಾವು ಒಟ್ಟಿಗೆ ಇರುವುದಾಗಿ ಪ್ರಮಾಣ ಮಾಡಿದ್ದರಿಂದ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದೇನೆ. ಇದು ನನ್ನ ನಿರ್ಧಾರ. ಯಾರೂ ಅದರಲ್ಲೂ ವಿಶೇಷವಾಗಿ ನನ್ನ ಮಕ್ಕಳನ್ನು ನನ್ನನ್ನು ದೂಷಿಸಬಾರದು" ಎಂದು ಬರೆಯಲಾಗಿದೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ಪೂನಂ ಮಿಶ್ರಾ, "ಕುಲ್ದೀಪ್ ತ್ಯಾಗಿ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ ತನ್ನ ಹೆಂಡತಿಗೆ ಮತ್ತು ನಂತರ ತನಗೆ ಗುಂಡು ಹಾರಿಸಿಕೊಂಡಿದ್ದಾರೆ. ಕುಲ್ದೀಪ್ ತ್ಯಾಗಿಗೆ ಕ್ಯಾನ್ಸರ್ ಇತ್ತು ಮತ್ತು ಅವರ ಕುಟುಂಬ ಸದಸ್ಯರಿಗೆ ಇದರ ಬಗ್ಗೆ ತಿಳಿದಿರಲಿಲ್ಲ ಎಂಬುದು ಡೆತ್ ನೋಟ್‌ನಿಂದ ಖಚಿತವಾಗಿದೆ. ಸದ್ಯ ಕೊಲೆ ಮತ್ತು ಆತ್ಮಹತ್ಯೆಗೆ ಬಳಸಿದ ಪಿಸ್ತೂಲ್‌ನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ರವಾನೆ ಮಾಡಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಈ ಭೀಕರ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ಇಡೀ ದೇಶದ ಗಮನ ಸೆಳೆದಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner