ಉತ್ತರ ಪ್ರದೇಶದ ಮೀರತ್ನಲ್ಲಿ ಮತ್ತೊಂದು ಊಹೆಗೂ ನಿಲುಕದ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಸತ್ತು ಬಿದ್ದಿದ್ದ ಗಂಡನ ನೋಡಿ ಹೆಂಡತಿ ಗಂಟಲು ಬಿರಿಯುವಂತೆ ಕೂಗಿದ್ದಳು. ಗಂಡನ ಮೃತದೇಹದ ಪಕ್ಕದಲ್ಲೇ ಒಂದು ನಾಗರಹಾವು ಹೆಡೆ ಬಿಚ್ಚಿ ಕೂತಿತ್ತು. ಆ ಹಾವು ಆ ವ್ಯಕ್ತಿಯನ್ನ 10 ಬಾರಿ ಕಚ್ಚಿ ಬುಸುಗುಡುತ್ತಿತ್ತು. ಅಲ್ಲಿ ಸತ್ತು ಬಿದ್ದಿದ್ದ ವ್ಯಕ್ತಿ ಹೆಸರು ಅಮಿತ್.
ಕೂಡಲೇ ಅಮಿತ್ ಪೋಷಕರು ಹಾವು ಹಿಡಿಯುವವರನ್ನ ಕರೆಸಿದರು. ಹಾವು ಹಿಡಿದ ಮೇಲೆ, ಆ ವ್ಯಕ್ತಿಯ ಪತ್ನಿ ಗಂಡನ ಮೃತದೇಹದ ಮೇಲೆ ಬಿದ್ದು, ಕಣ್ಣೀರ ಕೋಡಿ ಹರಿಸಿದ್ದಳು. ಇಡೀ ಊರೇ ಅಯ್ಯೋ ಎಂಥಾ ದುರ್ವಿಧಿ ಇದು. ಮಲಗಿದ್ದವನನ್ನ ಈ ಹಾವು ಕೊಂದು ಬಿಟ್ಟಿದೆ ಅಂತ ಹಾವನ್ನ ಶಪಿಸುತ್ತಿದ್ದರು. ಮುತ್ತೈದೆಗೆ ಆಶೀರ್ವಾದಿಸಬೇಕಿದ್ದ ನಾಗರಹಾವು ಈ ಹೆಣ್ಣಿನ ಕುಂಕುಮವನ್ನ ಕಿತ್ತು ಕೊಂಡುಬಿಟ್ಟ ಅಂತ ಗೋಳಾಡುತ್ತಿದ್ದರು.
ಘಟನಾ ಸ್ಥಳಕ್ಕೆ ಬಂದಿದ್ದ ಪೊಲೀಸರು, ಅಮಿತ್ನ ಮೃತದೇಹವನ್ನ ಪೋಸ್ಟ್ ಮಾರ್ಟಮ್ಗೆ ಕಳಿಸಿಕೊಟ್ಟಿದ್ದರು. ಆದರೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ನೋಡಿದ ಮೇಲೆ, ಪೊಲೀಸರಿಗೆ ಶಾಕ್ ಆಗಿತ್ತು. ಆ ರಿಪೋರ್ಟ್ನಿಂದಲೇ ಅಸಲಿ ಕಥೆ ಬಯಲಾಗಿತ್ತು. ಪೋಸ್ಟ್ಮಾರ್ಟಂ ರಿಪೋರ್ಟ್ ಪ್ರಕಾರ ಅಮಿತ್ ಹಾವು ಕಚ್ಚಿ ಸತ್ತಿರಲಿಲ್ಲ. ಬದಲಿಗೆ ಉಸಿರುಗಟ್ಟಿ ಸತ್ತಿದ್ದ
ಆ ನಾಗರ ಹಾವು ಅಮಿತ್ನನ್ನು ಕಚ್ಚಿದ್ದು ನಿಜ ಆದ್ರೆ ಅಮಿತ್ ಹಾವು ಕಚ್ಚೋದಕ್ಕೂ ಮುನ್ನವೇ ಜೀವ ಬಿಟ್ಟಿದ್ದ. ಅಮಿತ್ ಜೀವ ಬಿಡೋಕು ಮುಂಚೆ, ಹಾವು ಅಮಿತ್ ಬಳಿ ಬರುವ ಮುಂಚೆ, ಅಮಿತ್ ಪಕ್ಕದಲ್ಲೇ ಇದ್ದವಳು ಅಮಿತ್ ಪತ್ನಿ ರಮಿತಾ.
ರಮಿತಾ, ಅಮಿತ್ನ ಮಡದಿ. ಆಕೆಗೆ ಅಮರದೀಪ್ ಎಂಬ ಪರ ಪುರುಷನ ಜೊತೆ ಅಕ್ರಮ ಸಂಬಂಧ ಇತ್ತು. ಇದಕ್ಕೆ ಪತಿ ಅಡ್ಡಿಯಾಗಿದ್ದ. ರಮಿತಾಳ ಪ್ರಿಯಕರ ಈಗೀಗ ಮೀಸೆ ಚಿಗುರುತ್ತಿರೋ ಎಳೆ ಹುಡುಗ.
ಈ ವಿಚಾರ ಗೊತ್ತಾಗಿ ಅಮಿತ್ ರಮಿತಾಳಿಗೆ ವಾರ್ನಿಂಗ್ ಕೊಟ್ಟಿದ್ದ. ಹಾಗೆ ಆ ಹುಡುಗನಿಗೂ ಎಚ್ಚರಿಕೆ ಕೊಟ್ಟಿದ್ದ. ಆದರೆ ರಮಿತಾಳಿಗೆ ಗಂಡನ ವಾರ್ನಿಂಗ್ ತಲೆಗೇರಿಲಿಲ್ಲ. ಯಾಕಂದ್ರೆ ತಲೆ ತುಂಬಾ ಪ್ರಿಯಕರನೇ ಇದ್ದ. ಒಂದು ದಿನ ಇಬ್ಬರು ಸೇರಿ, ಗಂಡನನ್ನ ಮುಗಿಸುವ ಪ್ಲ್ಯಾನ್ ಮಾಡಿದ್ದರು. ಆ ದಿನ ಅಮಿತ್ ಊಟ ಮುಗಿಸಿ ಮಲಗಿದ್ದಾಗ, ರಮಿತಾ ಮನದನ್ನೆಯನ್ನ ಕರೆಸಿದ್ದಳು. ಆ ದಿನ ಇಬ್ಬರು ಮಲಗಿದ್ದ ಅಮಿತ್ನ ಉಸಿರುಗಟ್ಟಿಸಿ ಕೊಂದೇ ಬಿಟ್ಟಿದ್ದರು.
ಗಂಡನನ್ನು ಕೊಲೆ ಮಾಡಿದ ಬಳಿಕ ರಮಿತಾಳಿಗೆ ಬಂಧನದ ಭೀತಿ ಶುರುವಾಗಿ, ಕೊಲೆಯನ್ನ ಆಕಸ್ಮಿಕ ಸಾವಂತೆ ಬಿಂಬಿಸೋಕೆ ಸಿದ್ಧಳಾಗಿದ್ದಳು. ಆಗ ಆಕೆಗೆ ಬಂದಿದ್ದ ಉಪಾಯವೇ ಈ ನಾಗರಹಾವು. ಸತ್ತು ಬಿದ್ದಿದ್ದವನ ಬೆಡ್ ಮೇಲೆ ಹಾವನ್ನ ಬಿಟ್ಟು, ಅದು ಗಂಡನನ್ನ ಕಚ್ಚುವವರೆಗೂ ಕಾದು ನೋಡಿ. ಹಾವು 10 ಬಾರಿ ಕಚ್ಚಿದ ಮೇಲೆ ಹಾವು, ಹಾವು ಅಂತ ಕೂಗಾಡಿದ್ದಾಳೆ.
ಆ ದಿನ ಅಮಿತ್ನ ನೋಡಿದವರೆಲ್ಲಾ ಮನೆಯವರೂ ಸೇರಿ, ಹಾವು ಕಚ್ಚಿದರಿಂದಲೇ ಅಮಿತ್ ಜೀವ ಹೋಗಿದೆ ಅಂತ ಅಂದುಕೊಂಡಿದ್ದರು. ಆದ್ರೆ ಮಾಸ್ಟರ್ ಪ್ಲಾನ್ ಮಾಡಿ, ಗಂಡನ ಮರ್ಡರ್ ಮಾಡಿದ್ದ, ರಮಿತಾಳ ರಮಿಸುವ ಆಟಕ್ಕೆ ಬ್ರೇಕ್ ಬೀಳಿಸಿದ್ದು ಪೋಸ್ಟ್ ಮಾರ್ಟ್ಂ ರಿಪೋರ್ಟ್.
ಗಂಡನ ಕೊಂದು ಪ್ರಿಯಕರನಿಗೆ ವಶವಾಗಬೇಕೆಂದಿದ್ದ ರಮಿತಾ, ಅತ್ತ ಗಂಡನೂ ಇಲ್ಲದೇ, ಇತ್ತ ಪ್ರೇಮಿಯೂ ಇಲ್ಲದೇ ಕೊಲೆಗಾತಿಯಾಗಿ ಜೈಲು ಸೇರಿದ್ದಾಳೆ. ರಮಿತಾಳ ಕ್ರೈಮ್ ಮೈಂಡ್ ಬಗ್ಗೆ ತಿಳಿದು ಇಡೀ ಊರಿನ ಜನ ದಂಗಾಗಿದ್ದಾರೆ.
Log in to write reviews