ಮಂಗಳೂರು, ಜನವರಿ 02: ಖಾಸಗಿ ಬಸ್ ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ಅಚಾತುರ್ಯದಿಂದ ಅನಾರೋಗ್ಯಕ್ಕೀಡಾಗಿದ್ದ ಕಿರುತೆರೆ ನಟ ವಿಜಯ್ ಶೋಭರಾಜ್ ಪಾವೂರು ಅವರ ಪತ್ನಿ, ಕಿರುತೆರೆಯ ರಾಜ-ರಾಣಿ ಹಾಗೂ ಗಿಚ್ಚಿ ಗಿಲಿಗಿಲಿ ಖ್ಯಾತಿಯ ದೀಪಿಕಾ ಸುವರ್ಣ ಅವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬಸ್ ಸಂಸ್ಥೆಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯ ಆಯೋಗ ಆದೇಶ ಹೊರಡಿಸಿದೆ.
ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದಿಂದ ಬೆಂಗಳೂರಿಗೆ ಪ್ರಯಾಣಿಸುವ ಅನೇಕ ಖಾಸಗಿ ಬಸ್‌ನಲ್ಲಿ ಸಮಸ್ಯೆಗಳಿದ್ದು, ಪ್ರಯಾಣಿಕರು ಎಷ್ಟೇ ಮನವಿ ಮಾಡಿದರೂ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಈ ಘಟನೆ ಬಳಿಕವಾದರೂ ಖಾಸಗಿ ಬಸ್ ಸಂಸ್ಥೆಗಳು ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ಬಸ್‌ನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ.
ದೀಪಿಕಾ ಸುವರ್ಣ ಎರಡು ವರ್ಷಗಳ ಹಿಂದೆ ಅಂದರೆ 2022ರ ಆಗಸ್ಟ್ 16ರಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ರೆಡ್ ಬಸ್ ಆ್ಯಪ್ ಮೂಲಕ ಖಾಸಗಿ ಬಸ್‌ನಲ್ಲಿ ಸ್ಲೀಪರ್ ಟಿಕೆಟ್ ಬುಕ್ ಮಾಡಿದ್ದರು. ರಾತ್ರಿ ಬಸ್ ಹತ್ತುತ್ತಿದ್ದಂತೆ ಬಸ್‌ನಲ್ಲಿ ತಿಗಣೆ ಕಾಟ ಶುರುವಾಗಿದೆ. ದೀಪಿಕಾ ಕೂಡಲೇ ಬಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದರೆ ಬಸ್ ಸಿಬ್ಬಂದಿ ದೀಪಿಕಾ ಅವರ ಸಮಸ್ಯೆಗೆ ಕ್ಯಾರೆ ಎಂದಿಲ್ಲ ಎನ್ನಲಾಗಿದೆ. ಬೆಂಗಳೂರು ತಲುಪುವ ವೇಳೆ ದೀಪಿಕಾ ತಿಗಣೆ ಕಾಟದಿಂದ ತತ್ತರಿಸಿ ಹೋಗಿದ್ದು, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೇ ಅವರು ಅಂದು ಪಾಲ್ಗೊಂಡಿದ್ದ ಕಾರ್ಯಕ್ರಮದಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಯಿತು. ಇದರಿಂದ ಆರ್ಥಿಕ ನಷ್ಟ ಉಂಟಾಗಿದ್ದು, ಇಷ್ಟೆಲ್ಲಾ ಅವಾಂತರಕ್ಕೆ ಕಾರಣರಾದ ಬಸ್ ಸಂಸ್ಥೆಯ ವಿರುದ್ಧ ದೀಪಿಕಾ ಸುವರ್ಣ ಮಂಗಳೂರಿನ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯ ಆಯೋಗ, ಆಸ್ಪತ್ರೆಗೆ ಖರ್ಚಾದ ವೆಚ್ಚ 18,650 ರೂಪಾಯಿಯನ್ನು ಅರ್ಜಿ ದಾಖಲಿಸಿದ 6-4-2023ರಿಂದ ಅನ್ವಯವಾಗುವಂತೆ ವರ್ಷಕ್ಕೆ ಆರು ಶೇಕಡಾ ಬಡ್ಡಿ ಸಹಿತ ಖಾಸಗಿ ಬಸ್ ಸಂಸ್ಥೆ ಪಾವತಿ ಮಾಡಬೇಕು. ಬಸ್ ಟಿಕೆಟ್ ದರ 840 ರೂಪಾಯಿಯನ್ನು ವಾರ್ಷಿಕ ಆರು ಶೇ. ಬಡ್ಡಿ ಸಹಿತ ಅರ್ಜಿದಾರರಿಗೆ ಪಾವತಿಸಬೇಕು. ಅರ್ಜಿದಾರ ಮಹಿಳೆಗಾದ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಪ್ರತಿಯಾಗಿ ಒಂದು ಲಕ್ಷ ರೂಪಾಯಿ ಪರಿಹಾರವನ್ನು ವಾರ್ಷಿಕ ಶೇ.6ರ ಬಡ್ಡಿಯೊಂದಿಗೆ ನೀಡಬೇಕು. ಅಲ್ಲದೇ ಅರ್ಜಿದಾರೆ ವಕೀಲಿಗೆ ನೀಡಿರುವ ಹತ್ತು ಸಾವಿರ ಹಣವನ್ನೂ ಸಹ ಬಸ್ ಸಂಸ್ಥೆಯೇ ಭರಿಸಬೇಕು ಎಂದು ತೀರ್ಪು ನೀಡಿದೆ.
Log in to write reviews