ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರಿಗೆ ಭೂ ಭ್ರಷ್ಟಾಚಾರ ಪ್ರಕರಣದಲ್ಲಿ 14 ವರ್ಷ ಜೈಲು ಶಿಕ್ಷೆ ಪ್ರಕಟವಾಗಿದೆ. ಅಲ್-ಖಾದಿರ್ ಟ್ರಸ್ಟ್‌ಗೆ ಸಂಬಂಧಿಸಿದ ಭೂಮಿಯ ಭ್ರಷ್ಟಾಚಾರ ಕೇಸ್‌ನಲ್ಲಿ ಇಮ್ರಾನ್ ಖಾನ್ ಅವರನ್ನು ದೋಷಿ ಎಂದು ಪರಿಗಣಿಸಲಾಗಿದ್ದು, ಈ ಶಿಕ್ಷೆ ವಿಧಿಸಿದೆ. ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿ ಅವರಿಗೂ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ ಪ್ರಕರಣದಲ್ಲಿ ವಿವಿಧ ಕಾರಣಗಳಿಂದ ಮೂರು ಬಾರಿ ಮುಂದೂಡಲ್ಪಟ್ಟಿದ್ದ ತೀರ್ಪನ್ನು ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಅವರು ಕಳೆದ ಬಾರಿ ಜನವರಿ 13ರಂದು ಪ್ರಕಟಿಸಿದ್ದಾರೆ ಎಂದು ವರದಿಯಾಗಿದೆ. ಇಮ್ರಾನ್ ಖಾನ್ ಅವರಿಗೆ ಜೈಲು ಶಿಕ್ಷೆ ಜೊತೆಗೆ 1 ಮಿಲಿಯನ್ ಪಾಕಿಸ್ತಾನಿ ಕರೆನ್ಸಿಯ ದಂಡವನ್ನು ವಿಧಿಸಲಾಗಿದೆ. ಇಮ್ರಾನ್ ಪತ್ನಿ ಬೀಬಿಗೆ ಅದರ ಅರ್ಧದಷ್ಟು ದಂಡ ವಿಧಿಸಲಾಗಿದೆ.
ರಾವಲ್ಪಿಂಡಿಯ ಅಡಿಯಾಲಾ ಜೈಲಿನಿಂದ ಕಾರ್ಯಾಚರಿಸುತ್ತಿರುವ ಅಕೌಂಟೆಬಿಲಿಟಿ ನ್ಯಾಯಾಲಯವು 2023ರ ಆಗಸ್ಟ್‌ನಲ್ಲಿ ಖಾನ್ ಅವರನ್ನು ಬಂಧಿಸಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲೇ ಈ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಅಲ್ಲದೇ ಮೂರು ಬಾರಿ ತೀರ್ಪು ಪ್ರಕಟಿಸುವುದನ್ನು ಮುಂದೂಡಿತ್ತು. ಇದೀಗ ಕೊನೆಗೂ ತೀರ್ಪು
ಪ್ರಕಟಿಸಲಾಗಿದೆ. ಇದು ಮಾಜಿ ಪ್ರಧಾನಿಗೆ ಶಿಕ್ಷೆಯಾದ ನಾಲ್ಕನೇ ಪ್ರಮುಖ ಪ್ರಕರಣವಾಗಿದೆ.
ಕಳೆದ ವರ್ಷ ಜನವರಿಯಲ್ಲಿ ಮೂರು ಹಿಂದಿನ ಪ್ರಕರಣಗಳು ಘೋಷಣೆಯಾಗಿದ್ದವು. ರಾಜ್ಯದ ಉಡುಗೊರೆಗಳನ್ನು ಮಾರಾಟ ಮಾಡುವುದು, ರಾಜ್ಯದ ರಹಸ್ಯಗಳನ್ನು ಸೋರಿಕೆ ಮಾಡುವುದು ಮತ್ತು ಕಾನೂನುಬಾಹಿರ ವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳು ಇವರ ಮೇಲಿತ್ತು. ಕೊನೆಗೆ ಈ ಎಲ್ಲ ಪ್ರಕರಣಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರು ಶಿಕ್ಷೆಗೆ ಗುರಿಯಾಗಿದ್ದಾರೆ.
ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) ಡಿಸೆಂಬರ್ 2023ರಲ್ಲಿ ಇಮ್ರಾನ್ ಖಾನ್ (72), ಅವರ ಪತ್ನಿ ಬುಶ್ರಾ ಬೀಬಿ (50) ಮತ್ತು ಇತರ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಇವರು ಬರೋಬ್ಬರಿ ಸುಮಾರು 50 ಶತಕೋಟಿ
ರೂಪಾಯಿಯಷ್ಟು ನಷ್ಟವನ್ನು ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇಮ್ರಾನ್ ಖಾನ್ ಅಧಿಕಾರದಲ್ಲಿದ್ದಾಗ ಹಣಕ್ಕೆ ಬದಲಾಗಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಂದ ಭೂಮಿಯನ್ನು ಉಡುಗೊರೆಯಾಗಿ ಸ್ವೀಕರಿಸಿದ ಆರೋಪವೂ ಇವರ ಮೇಲಿದೆ.
ಇಮ್ರಾನ್ ಖಾನ್ ಪತ್ನಿ ಬೀಬಿ ಅವರು ಅಲ್-ಖಾದಿರ್ ಟ್ರಸ್ಟ್‌ನ ಟ್ರಸ್ಟಿಯಾಗಿ, ಝೀಲಂನಲ್ಲಿರುವ ಅಲ್-ಖಾದಿರ್ ವಿಶ್ವವಿದ್ಯಾನಿಲಯಕ್ಕಾಗಿ 458 ಕನಾಲ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಸೇರಿದಂತೆ ಇದರಿಂದ ಲಾಭ ಪಡೆದಿರುವ ಆರೋಪ ಹೊತ್ತಿದ್ದಾರೆ. ಆದರೆ ಇಮ್ರಾನ್ ಅವರು ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು. 2023ರಲ್ಲಿ ಇಮ್ರಾನ್‌ರನ್ನ ಬಂಧಿಸಿದಾಗಿನಿಂದ ಅವರ ವಿರುದ್ಧದ ಎಲ್ಲ ಆರೋಪಗಳು ಸುಳ್ಳು ಹಾಗೂ ನನ್ನನ್ನು ಕಚೇರಿಗೆ ಹಿಂತಿರುಗದಂತೆ ತಡೆಯಲು ಪ್ರತಿಸ್ಪರ್ಧಿಗಳ ಸಂಚು ಎಂದೇ ದೂರಿದ್ದರು. ಆದರೆ ಅಂತಿಮವಾಗಿ ಇಮ್ರಾನ್ ಖಾನ್ ಅವರನ್ನು ಈ ಪ್ರಕರಣದಲ್ಲಿ ದೋಷಿ ಎಂದು ನಿರ್ಧರಿಸಿ ಕೋರ್ಟ್ ಶಿಕ್ಷೆ ಕೂಡ ವಿಧಿಸಿದೆ.
Log in to write reviews