No Ads

"ನೂರು ಜನ್ಮಕೂ' ಧಾರಾವಾಹಿಯಲ್ಲಿ ಪ್ರಪ್ರಥಮ ಬಾರಿಗೆ 'ಸಂಪೂರ್ಣ ಮಂತ್ರಾಲಯ ದರ್ಶನ'

ಮನರಂಜನೆ 2025-03-21 12:39:49 79
post

ಕಲರ್ಸ್ ಕನ್ನಡ ವಾಹಿನಿ ಮೊದಲಿನಿಂದಲೂ ಅನೇಕ ಪ್ರಥಮಗಳನ್ನು ಮಾಡುತ್ತಾ ಬಂದಿದೆ.

ಆ ಪಟ್ಟಿಗೆ ಈಗ ಎರಡೆರಡು ಹೊಸ 'ಪ್ರಥಮ'ಗಳು ಸೇರಿದೆ.

ಇದೇ ಮೊದಲ ಬಾರಿಗೆ ಕಲರ್ಸ್ ಕನ್ನಡ ವಾಹಿನಿ "ಮಂತ್ರಾಲಯ'ದೊಳಗೆ ಚಿತ್ರೀಕರಣ ಮಾಡಿದೆ. ಹಾಗೂ ಪ್ರಪ್ರಥಮ ಬಾರಿಗೆ ಮಂತ್ರಾಲಯ ಮಠದ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು ಸೀರಿಯಲ್ ನಲ್ಲಿ ತಾವೇ ಆಗಿ ಹರಸಿ ಆಶೀರ್ವದಿಸಿದ್ದಾರೆ. 

ಹೌದು, ಇದುರೆಗೆ ಯಾವುದೇ  ಮನರಂಜನಾ ವಾಹಿನಿಯಲ್ಲಿ ಮಂತ್ರಾಲಯವನ್ನು ಸಂಪೂರ್ಣವಾಗಿ ತೋರಿಸಿದ್ದಿರಲಿಲ್ಲ. ಆದರೆ "ಕಲರ್ಸ್ ಕನ್ನಡ' ವಾಹಿನಿ ತನ್ನ ಜನಪ್ರಿಯ ಧಾರಾವಾಹಿ "ನೂರು ಜನ್ಮಕೂ' ಚಿತ್ರೀಕರಣವನ್ನು ಮಂತ್ರಾಲಯದೊಳಗೆ ಮಾಡಿ ಪ್ರೇಕ್ಷಕರಿಗೆ  ಮಂತ್ರಾಲಯದ  ದರ್ಶನವನ್ನು ಮಾಡಿಸಲಿದೆ.

ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ರಾಯರ ಸನ್ನಿಧಿ ಮಂತ್ರಾಲಯ. ಯಾವುದೇ ಕಷ್ಟವಿದ್ದರು ರಾಯರನ್ನು ನೆನೆದರೆ, ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಆಂಧ್ರಪ್ರದೇಶದಲ್ಲಿರುವ ಮಂತ್ರಾಲಯವು ಬಹಳ ಪ್ರಸಿದ್ಧಿಯನ್ನು ಹೊಂದಿರುವ ದೇವಾಲಯ.  ಸ್ಮರಣೆ ಮಾತ್ರದಲಿ ಕ್ಲೇಶಕಳೆದು ಸದ್ಗತಿಯ ಕೊಡುವ ರಾಘವೇಂದ್ರ ಸ್ವಾಮಿಯ ದರ್ಶನ ಮಾಡಲು 'ನೂರು ಜನ್ಮಕೂ' ಧಾರಾವಾಹಿಯ ಕಥಾನಾಯಕಿ ಮೈತ್ರಿ ಮತ್ತು  ಕಥಾನಾಯಕ ಚಿರಂಜೀವಿ ತಮ್ಮ ಕುಟುಂಬದೊಂದಿಗೆ ಹೋಗಲು ಮುಖ್ಯ ಕಾರಣ ಏನು ಗೊತ್ತಾ? ಒಂದು ಹಳೆಯ ಹರಕೆ!

 

  'ನೂರು ಜನ್ಮಕೂ' ಧಾರಾವಾಹಿ ಕಥಾನಾಯಕಿ ಮೈತ್ರಿಯ ಜೀವನದಲ್ಲಿ ಸಂಕಷ್ಟಗಳ ಸರಮಾಲೆಯೇ ತುಂಬಿದೆ. ಅವಳ ತಂದೆ ತಾಯಿ - ರಮೇಶ್ - ರಾಣಿ .  ಅವರಿಬ್ಬರೂ ಇದಕ್ಕೆಲ್ಲಾ ಏನು ಕಾರಣ ಎಂದು ಯೋಚಿಸುತ್ತ ಕೂತಾಗ ಅವರಿಗೆ ಮೈತ್ರಿ ಹುಟ್ಟುವ ಮುನ್ನ ತಾವು ಹೊತ್ತ ಹರಕೆ ನೆನಪಾಗುತ್ತದೆ. ಆ ಕಾರಣಕ್ಕೆ ಮೈತ್ರಿಗೆ ಕೆಟ್ಟದ್ದು ಆಗ್ತಿರಬಹುದು ಅಂತ ನಿರ್ಧರಿಸಿ ಮಂತ್ರಾಲಯಕ್ಕೆ ಮಗಳು ಹಾಗೂ ಅಳಿಯ ಚಿರಂಜೀವಿಯನ್ನು ಕರೆದುಕೊಂಡು ಹೋಗುವ ನಿರ್ಧಾರ ಮಾಡುತ್ತಾರೆ.

 

       ಯಾವ ಜನ್ಮದ ಮೈತ್ರಿ?

ಹರಕೆಯ ಕಾರಣಕ್ಕೆ ಮಂತ್ರಾಲಯಕ್ಕೆ ಭೇಟಿ ನೀಡುವ ಮೈತ್ರಿಗೂ ಹಾಗೂ ಮಂತ್ರಾಲಯಕ್ಕೂ ಇರುವ "ಆ ಜನ್ಮ ಸಂಬಂಧ' ಇಲ್ಲಿ ಬಯಲಾಗುತ್ತದೆ. ಮೈತ್ರಿ ಮಂತ್ರಾಲಯದಲ್ಲಿ ಹೆಜ್ಜೆ ಇಡುತ್ತಿದ್ದ ಹಾಗೆ ಅಲ್ಲಿದ್ದ ಸಾಧು ಒಬ್ಬರಿಗೆ ಮೈತ್ರಿ ಬಂದಳು ಅನ್ನೋ ಸೂಚನೆ ಸಿಗತ್ತೆ. ಮೈತ್ರಿಗೂ ಮಂತ್ರಾಲಯಕ್ಕೂ ಒಂದು 'ಪೂರ್ವ ಜನ್ಮದ ಪುಣ್ಯ' ಇರುವ ಹಾಗೆ ಕತೆ ಸಾಗುತ್ತದೆ.  ನಂತರ ಗುರುರಾಯರ ಪವಾಡಗಳು ನಡೆಯುತ್ತಾ ಹೋಗಿ, ಮೈತ್ರಿ ಮತ್ತು ಚಿರಂಜೀವಿಯ ಬದುಕಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎಂದು ಕಿರುತೆರೆಯಲ್ಲಿಯೇ ನೋಡಬೇಕು.

 

ಆಶೀರ್ವದಿಸಿದ ಸ್ವಾಮೀಜಿ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು

 ಈ ಸನ್ನಿವೇಶದಲ್ಲಿಮಂತ್ರಾಲಯದ ಸ್ವಾಮೀಜಿ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು ಚಿರಂಜೀವಿ ಹಾಗೂ ಮೈತ್ರಿಗೆ ಆಶೀರ್ವಾದವನ್ನು ಮಾಡುತ್ತಾರೆ.  ಸುಬುಧೇಂದ್ರ ತೀರ್ಥರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಕಲರ್ಸ್ ವಾಹಿನಿ ನಿಜಕ್ಕೂ ಹೆಮ್ಮೆ ಪಡುವ ಗೌರವದ ವಿಷಯವಾಗಿದೆ.

 

               ಮಂತ್ರಾಲಯಕೆ ಹೋಗೋಣ !

ಮಂತ್ರಾಲಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನ ಇದೆ. ಇಲ್ಲಿ ನಾಯಕಿ ಮಾಡುವ ಪ್ರಾರ್ಥನೆಯ ದೊಡ್ಡ ಸನ್ನಿವೇಶವೊಂದರ ಚಿತ್ರೀಕರಣವಾಗಿದೆ.

ಶ್ರೀ ಗುರು ರಾಘವೇಂದ್ರ ಸ್ವಾಮಿ ಪ್ರಭಾವಿ ಸಂತರಾಗಿದ್ದರು. ಅವರು ವೈಷ್ಣವ ಧರ್ಮವನ್ನು ಮತ್ತು ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ತತ್ವಶಾಸ್ತ್ರವನ್ನು ಪ್ರತಿಪಾದಿಸಿದರು. ಅವರನ್ನು ನರಸಿಂಹ ಅವತಾರದಲ್ಲಿ ವಿಷ್ಣುವಿನಿಂದ ರಕ್ಷಿಸಲ್ಪಟ್ಟ ಭಕ್ತ ಪ್ರಹ್ಲಾದನ  ಪುನರ್ಜನ್ಮವೆಂದು ಪರಿಗಣಿಸಲಾಗಿದೆ. 'ಭವರೋಗ ಕಳೆಯುವ ರಾಘವೇಂದ್ರ ಸ್ವಾಮಿಯಂತಹ ಮಹಾಮಹಿಮರ ಸನ್ನಿಧಾನದಲ್ಲಿ ನೂರು ಜನ್ಮಕೂ ಧಾರಾವಾಹಿ ಚಿತ್ರಿತವಾಗಿದ್ದು ನಮ್ಮ ಭಾಗ್ಯ' ಎನ್ನುತ್ತಾರೆ ಧಾರಾವಾಹಿಯ ನಿರ್ಮಾಪಕ ಗುರುದಾಸ್ ಶೆಣೈ. ಮಂತ್ರಾಲಯದ ಪ್ರಮುಖ ಆಕರ್ಷಣೆ ದೇವಾಲಯ ಮತ್ತು ಮಠ "ಸಂಕೀರ್ಣ".  ಈ ಭಾಗಗಳಲ್ಲಿ ಹಾಗೂ ಮಂತ್ರಾಲಯದ ಮೂಲೆ ಮೂಲೆಯಲ್ಲೂ ಒಳಗೂ ಹೊರಗೂ ಸತತ ಮೂರು ದಿನಗಳ ಕಾಲ ಧಾರಾವಾಹಿ ಚಿತ್ರೀಕರಣಗೊಂಡಿದ್ದು ಈ ಮೂರು ದಿನಗಳ ನೆನಪು 'ನೂರು ಜನ್ಮಕೂ ' ಉಳಿಯುವಂಥದ್ದು ಎನ್ನುವುದು ಧಾರಾವಾಹಿ ತಂಡದ ಅಭಿಮತ.

 

ಈ ವಾರಾಂತ್ಯ  ಶನಿವಾರ ಮತ್ತು ಭಾನುವಾರ   (ಮಾರ್ಚ್ 22, 23) ಸಂಜೆ 6:30 ಕ್ಕೆ

ಕರ್ನಾಟಕದ ಗಡಿಯ ಬಳಿ ಮತ್ತು ತುಂಗಾ ನದಿಯ ತೀರದಲ್ಲಿರುವ ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಿಂದ 74 ಕಿ.ಮೀ ಮತ್ತು ಹೈದರಾಬಾದ್ ನಿಂದ 250 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಇಡೀ ಧಾರಾವಾಹಿ ತಂಡ ಪಯಣಿಸಿ ತುಂಗಾ ತೀರದಲ್ಲಿ ಮಿಂದು ಗುರು ರಾಯರ ದರ್ಶನ ಮಾಡಿ ಧನ್ಯವಾಗಿದೆ. ರಾಯರು ಮತ್ತು ಅವರ ಭಕ್ತರ ಸೇವೆಗೆ ತನ್ನನ್ನು ಮುಡುಪಾಗಿಸಿಕೊಂಡಿರುವ  ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಮಂಡಳಿಯು  ಕಲರ್ಸ್  ಕನ್ನಡದ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿದ್ದು  ವಾಹಿನಿಯ ಪಾಲಿಗೆ ಇದು ಹೆಮ್ಮೆಯ ವಿಚಾರವಾಗಿದೆ.

                                   ಈ ವಾರಾಂತ್ಯ  ಶನಿವಾರ ಮತ್ತು ಭಾನುವಾರ   (ಮಾರ್ಚ್ 22, 23) ಸಂಜೆ 6:30 ಕ್ಕೆ ಮನೆಯಲ್ಲಿಯೇ ಕುಳಿತು ಮಂತ್ರಾಲಯದ ದರ್ಶನ ಮಾಡಿ ಕೊಡಲಿದೆ, ಕಲರ್ಸ್  ಕನ್ನಡದ  'ನೂರು ಜನ್ಮಕೂ ' ಧಾರಾವಾಹಿ ತಂಡ. ಒಟ್ಟಿನಲ್ಲಿ 'ಮಂತ್ರಾಲಯಕೆ ಹೋಗೋಣ, ಗುರುರಾಯರ ದರುಶನ ಮಾಡೋಣ' ಅಂತ ಡಾ ರಾಜಕುಮಾರ್ ಅವರು  ಹಾಡಿದ್ದನ್ನು ಪ್ರೇಕ್ಷಕರು ನಿಜ ಮಾಡಿಕೊಳ್ಳುವ ಸಮಯ ಬಂದಿದೆ. ಮರೆಯದೇ ನೋಡಿ.

No Ads
No Reviews
No Ads

Popular News

No Post Categories
Sidebar Banner
Sidebar Banner