ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರ ಮೇಲೆ ಮೊಟ್ಟೆ ಎಸೆತ ಪ್ರಕರಣವು ಇದೀಗ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಸುಮಾರು 100ಕ್ಕೂ ಹೆಚ್ಚು ಮಂದಿಯ ವಿರುದ್ಧ ನಂದಿನಿ ಲೇಔಟ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಮುನಿರತ್ನ ನೀಡಿರುವ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸುಮಾರು 100ರಿಂದ 150 ಜನರನ್ನು ಬಳಸಿಕೊಂಡು ನನ್ನ ಕೊಲೆ ಮಾಡಲು ಕಾಂಗ್ರೆಸ್ ನಾಯಕರು ಸಂಚು ರೂಪಿಸಿದ್ದಾರೆ ಎಂದು ಮುನಿರತ್ನ ತಮ್ಮ ದೂರಿನಲ್ಲಿ ಆರೋಪ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದರು. ನಿನ್ನೆ ಮೂವರಿಗೂ ಜಾಮೀನು ಸಿಕ್ಕಿದ್ದು, ಹೊರಬಂದಿದ್ದಾರೆ. ನನ್ನ ಜೀವಕ್ಕೆ ಅಪಾಯವಿದೆ ಎಂದು ಈಗಾಗಲೇ ರಾಜ್ಯಪಾಲರಿಗೂ ದೂರು ನೀಡಿದ್ದೇನೆ. ಆದರೂ ನನಗೆ ಗನ್‌ಮ್ಯಾನ್ ಕೊಟ್ಟಿಲ್ಲ. ಕೆಲವರು ವಕೀಲರ ವೇಷದಲ್ಲಿ ಬಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೇಳಿದ್ದರು. ರಾಜೀನಾಮೆ ಕೊಡದಿದ್ದರೆ, ಪೋಕ್ಸೋ ಕೇಸ್ ಹಾಕಿಸಿ ಜೈಲಿಗೆ ಕಳುಹಿಸುವುದಾಗಿ ವಾರ್ನಿಂಗ್ ಕೊಟ್ಟಿದ್ದರು. ಅಲ್ಲದೆ ಕುಸುಮಾ ಅವರು ಎಂಎಲ್‌ಎ ಆಗಬೇಕು, ಬಳಿಕ ಅವರು ಸಚಿವರಾಗಿ ಅಧಿಕಾರಕ್ಕೆ ಬರಬೇಕು. ಇದು ನಮ್ಮಣ್ಣ ಡಿ.ಕೆ.ಸುರೇಶ್ ಅವರ ಆಸೆ ಎಂದು ಬೆದರಿಕೆ ಹಾಕಿದ್ದಾಗಿಯೂ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಮುನಿರತ್ನ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಮೊಟ್ಟೆ ಎಸೆದು ಹಲ್ಲೆಗೆ ಯತ್ನಿಸಿತ್ತು ಎಂದು ಆರೋಪಿಸಲಾಗಿದೆ. ಈ ಘಟನೆ ಬಳಿಕ ಅಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯೂ ನಡೆದು, ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದರು. ನನ್ನ ರಾಜಕೀಯವಾಗಿ ಮುಗಿಸಲು ಕೊಲೆ ಯತ್ನ ನಡೆದಿದ್ದು, ಕುಸುಮಾ ಅವರನ್ನು ಎಂಎಲ್‌ಎ ಮಾಡಲು ನನ್ನ ಮೇಲೆ ಮೊದಲಿನಿಂದಲೂ ಸಂಚು ನಡೆಯುತ್ತಿದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮುನಿರತ್ನ ಅವರು ಎದುರು ಕಾಂಗ್ರೆಸ್‌ನ ಕುಸುಮಾ ಅವರು ಸ್ಪರ್ಧಿಸಿ ಸೋಲು ಕಂಡಿದ್ದರು. ಈ ವೇಳೆ ಇಬ್ಬರ ನಡುವೆ ಭಾರಿ ಗಲಾಟೆ ನಡೆದಿತ್ತು. ಮುನಿರತ್ನ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಕುಸುಮಾ ಅವರು ಇದೆಲ್ಲ ಮುನಿರತ್ನ ಅವರ ನಾಟಕ ಎಂದು ತಿರುಗೇಟು ನೀಡಿದ್ದಾರೆ. ಈ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಮೊಟ್ಟೆ ಎಸೆತ ಪ್ರಕರಣ:100ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್ಐಆರ್
No Ads
Log in to write reviews