No Ads

ಶಿವರಾತ್ರಿಗೆ ಕ್ಷೇತ್ರಪತಿ ನೋಡಲು ಮರೀಬೇಡಿ ! ಕಲರ್ಸ್ ಕನ್ನಡದಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್

ಮನರಂಜನೆ 2025-02-25 11:49:50 299
post

“ನಮ್ಮ ಮಣ್ಣಿನ ಹೆಮ್ಮೆಯ ಚಿತ್ರ” ಎಂದು ಕನ್ನಡ ಚಿತ್ರರಸಿಕರು ಹೆಮ್ಮೆಯಿಂದ ಬೀಗಬಹುದಾದ ಚಿತ್ರ ಕ್ಷೇತ್ರಪತಿ. ಒಂದು ಗಂಭೀರ ಮತ್ತು ಜನಪರ ಅಂಶಗಳನ್ನು ಮನರಂಜನಾತ್ಮಕವಾಗಿ ಬೆರೆಸಿ ಜನರ ಮನ ಗೆದ್ದಿದೆ.  ಇದು ನಟ ನವೀನ್ ಶಂಕರ್ ಗೆ ಹೊಸ ಇಮೇಜ್ ಗಳಿಸಿ ಕೊಟ್ಟ ಚಿತ್ರ. ಕೆ ಜಿ ಎಫ್ ಖ್ಯಾತಿಯ ಅರ್ಚನಾ ಜೋಯಿಸ್, ಅಚ್ಯುತ್  ಕುಮಾರ್ ತಾರಾಗಣದ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತವಿದೆ. 
ಕಲರ್ಸ್ ಕನ್ನಡದಲ್ಲಿ  ಬುಧವಾರ (26 ಫೆಬ್ರವರಿ) ಶಿವರಾತ್ರಿಯಂದು ಮಧ್ಯಾಹ್ನ ಎರಡು ಗಂಟೆಗೆ ಪ್ರಸಾರವಾಗಲಿದ್ದು, ಚಿತ್ರ ರಸಿಕರು ನೋಡಿ ಆನಂದಿಸಲೇ ಬೇಕಾದ ಸಿನಿಮಾ ಕ್ಷೇತ್ರಪತಿ. 
ಶ್ರೀಕಾಂತ ಕಟಗಿ ನಿರ್ದೇಶನದ ಕ್ಷೇತ್ರಪತಿ ರೈತರ ಸಮಸ್ಯೆಗಳ ಬಗ್ಗೆ ಸಮಾಜದ ಗಮನ ಸೆಳೆದ ಸಿನಿಮಾ. ರೈತ ಪರ  ಸಿನಿಮಾ ಎಂದು ವಿಮರ್ಶಕರಿಂದ ಮನ್ನಣೆ ಪಡೆದ, ಈ ಚಿತ್ರ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. 
"ರೈತ ನಮ್ಮ ದೇಶದ ಬೆನ್ನೆಲುಬು, ಲಿವರ್, ಕಿಡ್ನಿ, ಜಠರ ಎಂದೆಲ್ಲ ಹೇಳಿ ನಮ್ಮನ್ನು ಉಬ್ಬಿಸಿ ಬಿಟ್ಟಿದ್ದಾರೆ. ಆದರೆ ನಮಗೇನು ಬೇಕು ಎಂದು ಈವರೆಗೆ ಯಾರಾದ್ರೂ ನಮ್ಮನ್ನು ಕೇಳಿದ್ದರೇನು?' ಎನ್ನುವುದು ಚಿತ್ರದ ನಾಯಕ ಬಸವ ಕೇಳುವ ಪ್ರಶ್ನೆ. 
ಕಥಾನಾಯಕ ಬಸವ ಇಂಜಿನಿಯರಿಂಗ್ ವಿದ್ಯಾರ್ಥಿ. ಅಮೇರಿಕಾದಲ್ಲಿ ಬದುಕು ಕಟ್ಟಿಕೊಳ್ಳುವ ಮಹದಾಸೆ ಹೊಂದಿರುವ ಜಾಣ ತರುಣ. ತಂದೆಯ ಸಾವಿನಿಂದ ಬಸವ ಹಳ್ಳಿಗೆ ಬರುವಂತಾಗುತ್ತದೆ. ಈರುಳ್ಳಿ ಬೆಲೆ ಕುಸಿತದಿಂದ ಕಂಗೆಟ್ಟು, ಬ್ಯಾಂಕ್ ಸಾಲದ ಶೂಲಕ್ಕೆ ಅಂಜಿ, ಬಸವನ ತಂದೆ ಉರುಳು ಹಾಕಿಕೊಂಡಿದ್ದಾನೆ. ಅಪ್ಪನ ಸಂಸ್ಕಾರಕ್ಕೆ ಬರುವ ಬಸವ ಊರಿನಲ್ಲಿಯೇ ಉಳಿಯಲು ನಿಶ್ಚಯಿಸುತ್ತಾನೆ. ಇಂಜಿನಿಯರಿಂಗ್ ಬಿಟ್ಟು ಕೃಷಿಯಲ್ಲಿಯೇ ತೊಡಗುತ್ತೇನೆ ಅನ್ನುವ ಕಥಾನಾಯಕನ ನಿರ್ಧಾರವನ್ನು ಮಲತಾಯಿಯೂ ವಿರೋಧಿಸುತ್ತಾಳೆ. ಅಪ್ಪನ ಸಾವಿಗೆ ಬಂದಿರುವ ಪರಿಹಾರ ಧನ ಬಳಸಿಕೊಂಡು ಇಂಜಿನಿಯರಿಂಗ್ ಮುಗಿಸಿ ಒಳ್ಳೆಯ ಕೆಲಸ ಹಿಡಿದು ತಂಗಿಯ ಮದುವೆ  ಮಾಡಿದ ನಂತರ  ಏನಾದರೂ ಮಾಡಿಕೊ ಎನ್ನುವುದು ತಾಯಿಯ ಒತ್ತಾಯ. ಬಸವ ಯಾರ ಮಾತಿಗೂ ಕಿವಿಗೊಡದೆ ಕಾಲೇಜು ತೊರೆದು ಮಣ್ಣಿನ ಅಂಗಳಕ್ಕೆ ಇಳಿಯುತ್ತಾನೆ. 
ಅಲ್ಲಿಂದ ಕತೆ ಪ್ರತಿಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತ ಭರಪೂರ ಮನರಂಜನೆ ನೀಡುತ್ತ ಸಾಗುತ್ತದೆ. 
ಉತ್ತರ ಕರ್ನಾಟಕದ ಜವಾರಿ ಭಾಷೆಯ ಸಿನೆಮಾ ಯಾವ ಹಂತದಲ್ಲೂ ಕುಸಿಯದೆ, ತೀವ್ರತೆ ಕಳೆದುಕೊಳ್ಳದೆ ಪ್ರೇಕ್ಷಕರನ್ನುಕೊನೆಯವರೆಗೂ ಹಿಡಿದಿಟ್ಟುಕೊಳ್ಳುವ ಕ್ಷೇತ್ರಪತಿ". ಈ ಮಹಾಶಿವರಾತ್ರಿಗೆ ಮಹಾಮನರಂಜನೆ ಅನ್ನುವುದು ಉತ್ಪ್ರೇಕ್ಷೆಯಲ್ಲ.

No Ads
No Reviews
No Ads

Popular News

No Post Categories
Sidebar Banner
Sidebar Banner