No Ads

ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್

ಕರ್ನಾಟಕ 2025-04-14 17:05:43 40
post

ಧಾರವಾಡ, ಏ.14: ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರು ಮಹಾನ್ ಧೀಮಂತ ನಾಯಕರು. ಅವರ ಚಿಂತನೆಗಳು, ಕೊಡುಗೆಗಳು ವಿಶೇಷವಾಗಿ ಅವರು ಸಂವಿಧಾನ ರಚಿಸಿರುವುದು ರಾಷ್ಟ್ರಕ್ಕೆ ನೀಡಿದ ಬಹು ದೊಡ್ಡ ಕೊಡುಗೆ ಆಗಿದೆ. ಭೂಮಿಯ ಮೇಲೆ ಸೂರ್ಯ ಚಂದ್ರರು ಇರುವವರೆಗೂ ಡಾ.ಬಿ.ಆರ್.ಅಂಬೇಡ್ಕರ ಅವರ ಹೆಸರು ಶಾಶ್ವತವಾಗಿ ಇರುತ್ತದೆ ಎಂದು ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು.

 

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಅವರ 134 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

 

ಡಾ.ಬಿ.ಆರ್.ಅಂಬೇಡ್ಕರ ಅವರನ್ನು ಒಂದು ಜಾತಿ, ಸಮುದಾಯಕ್ಕೆ ಸೀಮಿತಗೊಳಿಸುವ ಪ್ರಯತ್ನವಾಗುತ್ತಿದೆ. ಆದರೆ ಅವರು ಜಾತಿ, ಧರ್ಮಗಳನ್ನು ಮೀರಿ ನಿಂತ ಮಹಾನ ಮೇಧಾವಿ ನಾಯಕ. ಅವರು ಸಂವಿಧಾನದ ಮೂಲಕ ನೀಡಿದ ಕೊಡುಗೆಗಳಿಂದ ಇಂದು ನಮ್ಮ ರಾಷ್ಟ ಶಾಂತವಾಗಿ, ಸುಗಮವಾಗಿ, ಆಡಳಿತಾತ್ಮಕವಾಗಿ ಮುನ್ನಡೆಯುತ್ತಿದೆ. ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ, ಅಭಿವ್ಯಕ್ತಿ ಮತ್ತು ಗೌರವಯುತ ಬದುಕು ಸಿಕ್ಕಿದ್ದು ಡಾ.ಬಿಆರ್.ಅಂಬೇಡ್ಕರ ಅವರಿಂದ ಎಂದು ಅವರು ಹೇಳಿದರು.

 

ಡಾ.ಬಿ.ಆರ್.ಅಂಬೇಡ್ಕರ ಅವರ ಶೈಕ್ಷಣಿಕ ಸಾಧನೆ, ಚಿಂತನೆಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯವಾಗಬೇಕು. ಯುವ ಸಮೂಹದಲ್ಲಿ ಡಾ.ಅಂಬೇಡ್ಕರ ಅವರ ಕೊಡುಗೆಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಚಿವರು ತಿಳಿಸಿದರು.

 

ಭಾರತಕ್ಕೆ ಮಹಾ ಮನವತಾವಾದಿ ಬಸವಣ್ಣ ಮತ್ತು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಅವರು ಎರಡು ಕಣ್ಣುಗಳಿದಂತೆ. ಅವರ ತತ್ತ್ವ, ಸಂದೇಶಗಳು ನಮ್ಮ ಸಮಾಜಕ್ಕೆ ಸದಾ ಕಾಲ ದಾರಿ ದೀಪಗಳಾಗಿವೆ. ಈ ಎರಡೂ ದಿವ್ಯ ಜ್ಯೋತಿಗಳು ಬೆಳಗಿದಷ್ಟು, ಭಾರತ ವಿಶ್ವದಲ್ಲಿ ಪ್ರಜ್ವಲಿಸಿ, ಪ್ರಕಾಶಿಸುತ್ತದೆ ಎಂದು ಸಚಿವ ಸಂತೋಷ ಲಾಡ ಹೇಳಿದರು.

 

ಅಮೆರಿಕಾದಂತ ಅಭಿವೃದ್ದಿತ ದೇಶಗಳು ವಿಜ್ಞಾನ, ಸಂಶೋಧನೆ, ಅಭಿವೃದ್ಧಿಗಳ ಬಗ್ಗೆ ಚಿಂತಿಸಿದರೆ, ಅಭಿವೃದ್ಧಿ ಹೊಂದುತ್ತಿರುವ ಭಾರತದಂತ ರಾಷ್ಟ್ರಗಳಲ್ಲಿ ಜಾತಿ, ಧರ್ಮ, ಪರಸ್ಪರ ಭಿನ್ನತೆಗಳು ಚರ್ಚಿತವಾಗುತ್ತಿವೆ. ಡಾ.ಬಿ.ಆರ್.ಅಂಬೇಡ್ಕರ ಅವರು ಅಸಮಾನತೆಗಳನ್ನು ತೊಲಗಿಸಿ, ಸಮಾನತೆ, ಸಹೊದರತ್ವ, ಸಾಮರಸ್ಯ, ಭಾವೈಕ್ಯತೆಗಳನ್ನು ಬೆಸೆಯಲು ಅವಕಾಶ ಮಾಡಿದ್ದಾರೆ. ಮುಂದಿನ ನೂರಾರು ವರ್ಷಗಳನ್ನು ಅವಲೋಕಿಸಿ, ಭವಿಷ್ಯದ ಭಾರತಕ್ಕೂ ತೊಂದರೆ ಆಗದಂತೆ ಸಂವಿಧಾನ ರೂಪಿಸಿ, ಆಡಳಿತಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಸಚಿವ ಸಂತೋಷ ಲಾಡ ಅವರು ತಿಳಿಸಿದರು.

 

ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆಯ ಹಕ್ಕುಗಳನ್ನು ನೀಡಿ, ಮಹಿಳಾ ಅಭಿವೃದ್ಧಿಗೆ ಡಾ.ಅಂಬೇಡ್ಕರ ಅವರು ಅವಕಾಶ ಕಲ್ಪಿಸಿದ್ದಾರೆ. ಮಹಿಳೆಯರ ಪ್ರಗತಿ ಮೇಲೆ ದೇಶದ ಅಭಿವೃದ್ಧಿ ಅವಲಂಬಿಸಿದೆ ಎಂದು ಅವರು ನಂಬಿದ್ದರು. ಅದಕ್ಕಾಗಿ ಮಹಿಳೆಯರ ಹಕ್ಕು, ಸ್ವಾತಂತ್ರ್ಯಗಳಿಗೆ ವಿಶೇಷ ಆದ್ಯತೆ ನೀಡಿದ್ದಾರೆ ಎಂದು ವಿವರಿಸಿದರು.

 

ಸಮಾರಂಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಮಾಜಿ ಸಂಸದ ಐ.ಜಿ.ಸನದಿ,ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಕೀರ ಸನದಿ, ಅಪರ ಜಿಲ್ಕಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಮೂಗನೂರಮಠ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭ, ರಾಜು ಕೊಟ್ಯಾನವರ, ಕಲ್ಮೇಶ ಹಾದಿಮನಿ, ಎಂ.ಅರವಿಂದ, ಬೌದ್ದ ಬಿಕ್ಕುಗಳು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ಮುಖಂಡರು ಇದ್ದರು.

No Ads
No Reviews
No Ads

Popular News

No Post Categories
Sidebar Banner
Sidebar Banner