ಈ ವರ್ಷದ ಬೇಸಿಗೆಯಲ್ಲಿ ಸೂರ್ಯನ ತಾಪಮಾನ ಹೇಳತೀರದಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಂತೂ ಕಳೆದ 5 ವರ್ಷಗಳಲ್ಲೇ ಅತ್ಯಂತ ಗರಿಷ್ಠ ಉಷ್ಣಾಂಶ 36.4 ಡಿಗ್ರಿ ದಾಖಲಾಗಿರುವುದು ಅಚ್ಚರಿ ಮೂಡಿಸಿದೆ. ಏಕೆಂದರೆ ಉದ್ಯಾನನಗರಿ ಎನಿಸಿಕೊಂಡ ಬೆಂಗಳೂರಲ್ಲೇ ಈ ಮಟ್ಟದ ಬಿಸಿ ಇದೆ ಎಂದರೆ ರಾಯಚೂರು, ಕಲಬುರಗಿ, ಬೀದರ್ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳ ತಾಪ ಹೇಗಿರಬಹುದು ನಿಮ್ಮ ಊಹೆಗೆ ಬಿಟ್ಟಿದ್ದು. ಅದು ಏನೇ ಇರಲಿ ಇಂತಹ ಜಳದಲ್ಲಿ ನಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು?. ದೇಹದಲ್ಲಿ ನೀರಿನಂಶ ಯಾವ ರೀತಿ ಸರಿಪಡಿಸಿಕೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ. ಬಿಸಿಲಿನಿಂದ ಚರ್ಮ, ಕಣ್ಣು ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಮ್ಮ ದೇಹದಲ್ಲಿ ಹೆಚ್ಚಾಗುತ್ತವೆ. ಸುಡು ಬಿಸಿಲಿನಲ್ಲಿ ನಡೆಯುವುದರಿಂದ ಹೀಟ್ ಸ್ಟ್ರೋಕ್, ನಿರ್ಜಲೀಕರಣ, ತಲೆನೋವು, ಸ್ಕಿನ್ ಟ್ಯಾನ್ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಆರೋಗ್ಯ ಕೆಟ್ಟು ಹೋಗುತ್ತದೆ. ಹೀಗಾಗಿ ಆರೋಗ್ಯದ ಕಡೆ ಗಮನ ಹರಿಸುವುದು ಮುಖ್ಯ. ಹಣ್ಣು, ತರಕಾರಿ, ಆರೋಗ್ಯಕರ ಕೊಬ್ಬು, ನಾರಿನಂಶ, ಕಾರ್ಬೋಹೈಡ್ರೇಟ್ ಅಂಶಗಳಿರುವ ಆಹಾರ ಸೇವಿಸಬೇಕು. ಇದರೊಂದಿಗೆ ಧಾನ್ಯಗಳು, ಒಣಹಣ್ಣುಗಳು, ಹಸಿರು ಸೊಪ್ಪು ಹಾಗೂ ಹಣ್ಣುಗಳು ನಮ್ಮ ಆರೋಗ್ಯದಲ್ಲಿ ಸಮ ಪ್ರಮಾಣದಲ್ಲಿ ಇರಬೇಕು. ಈ ಮೂಲಕ ದೇಹದ ತಾಪವನ್ನು ತಣಿಸಿಕೊಳ್ಳುವ ಜೊತೆಗೆ ಆರೋಗ್ಯವನ್ನೂ ಸೂಕ್ತವಾಗಿ ಕಾಪಾಡಿಕೊಳ್ಳಬಹುದು. ದೇಹದಲ್ಲಿ ನೀರಿನಾಂಶ ಜಾಸ್ತಿ ಮಾಡಲು ನೀರು ಹೆಚ್ಚಾಗಿಯೇ ಕುಡಿಯಬೇಕು. ಕೆಲವೊಮ್ಮೆ ನೀರನ್ನು ಕುಡಿಯಲಾಗಲ್ಲ. ಅಂತಹ ಸಂದರ್ಭದಲ್ಲಿ ನೀರಿನಾಂಶ ಅಧಿಕವಾಗಿರುವ ಎಳೆನೀರು, ಅನಾನಸ್, ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿ, ಆರೆಂಜ್ನಂತಹ ಹಣ್ಣುಗಳನ್ನು ಸೇವಿಸುವುದು ಉತ್ತಮ. ಇವು ನಮ್ಮ ದೇಹಕ್ಕೆ ನೀರಿನಾಂಶ ಒದಗಿಸುವುದರ ಜೊತೆಗೆ ಚೈತನ್ಯವನ್ನು ಕೊಡುತ್ತವೆ. ಬೇಸಿಗೆ ಆಗಿದ್ದರಿಂದ ಆದಷ್ಟು ನಾನ್ವೆಜ್ ಹಾಗೂ ಮೊಟ್ಟೆಯಿಂದ ಮಾಡುವ ಖಾದ್ಯಗಳನ್ನ ಕಡಿಮೆ ತಿನ್ನುವುದು ಉತ್ತಮ. ಪಾನಿಪುರಿ, ಬೇಲ್ಪುರಿ ಸೇರಿದಂತೆ ಸಂಜೆಯ ಚಾಟ್ಸ್ ಸೇವನೆ ಕಡಿಮೆ ಮಾಡಿದರೆ ಅಸಿಡಿಟಿ, ಎದೆಯುರಿ, ಎದೆ ಅಥವಾ ಗಂಟಲಿನಲ್ಲಿ ನೋವು, ಕತ್ತಿನ ಭಾಗದಲ್ಲಿ ಸುಡುವ ಸಂವೇದನೆಯಂತವುಗಳನ್ನ ಸುಲಭವಾಗಿ ತಡೆಯಬಹುದು. ಏಕೆಂದರೆ ಇವುಗಳಲ್ಲಿ ಮಸಾಲೆ ಪದಾರ್ಥಗಳನ್ನ ಹೆಚ್ಚಾಗಿ ಬಳಕೆ ಮಾಡುವುದರಿಂದ ಬಿಸಿಲಿಗೆ ವ್ಯತಿರಿಕ್ತ ಪರಿಣಾಮ ಬೀರಿ ನಮ್ಮ ದೇಹಕ್ಕೆ ಹಾನಿ ಮಾಡುತ್ತಾವೆ. ಹೀಗಾಗಿ ಬಿಸಿಲಿನ ತಾಪಕ್ಕೆ ಹಣ್ಣಿನಂತ ನೈಸರ್ಗಿಕ ಆಗಿರುವುದನ್ನು ತಿನ್ನುವುದು ದೇಹಕ್ಕೆ ಒಳ್ಳೆಯದು.
ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳೋದು ಹೇಗೆ
No Ads
Log in to write reviews