ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪ್ರತಾಪ್ ಸಿಂಹ ವಿರುದ್ಧ ಮೈಸೂರು ಯುವ ಕಾಂಗ್ರೆಸ್ ಮುಖಂಡ ಸೈಯದ್ ಅಬ್ರರ್ ನೀಡಿದ ದೂರಿನ ಅನ್ವಯ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ಉದಯಗಿರಿ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಪ್ರತಾಪ್ ಸಿಂಹ ಅವರು, ‘ದೇಶ ಇಬ್ಭಾಗವಾದಾಗಲೇ ಮುಸ್ಲಿಮರು ಈ ದೇಶ ಬಿಟ್ಟು ತೊಲಗಿಬಿಡಬೇಕಿತ್ತು. ಇಲ್ಲಿ ಉಳಿದಕೊಂಡವರು ಮಕ್ಕಳನ್ನು ಹುಟ್ಟಿಸುವುದು ಬಿಟ್ಟು ಬೇರೇನು ಮಾಡುತ್ತಿದ್ದಾರೆ ಹೇಳಿ? ಎಂದು ಹೇಳಿದ್ದರು.
ಸೋಷಿಯಲ್ ಮಿಡೀಯಾದಲ್ಲಿ ವ್ಯಕ್ತಿಯೊಬ್ಬ ಮಾಡಿದ್ದ ಪೋಸ್ಟ್ ವೊಂದು ಒಂದು ಸಮುದಾಯವನ್ನು ಕೆರಳಿಸಿತ್ತು. ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಯುವಕನೋರ್ವ ಸಂಸದ ರಾಹುಲ್ ಗಾಂಧಿ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿವಸ್ತ್ರಗೊಳಿಸಿ, ಭಾವಚಿತ್ರಕ್ಕೆ ತಲೆ ಮೇಲೆ ಮುಸ್ಲಿಮರು ಬಳಸುವ ಟೊಪ್ಪಿ ಇಟ್ಟು, ದೇಹದ ಮೇಲೆಲ್ಲಾ ಉರ್ದು ಭಾಷೆಯ ಕೆಲ ಪದ ಬರೆದು ಪೋಸ್ಟ್ ಮಾಡಿದ್ದ. ಇದು ಮುಸ್ಲಿಂ ಸಮುದಾಯದವರು ಕೆರಳುವಂತೆ ಮಾಡಿತ್ತು.
ಬಳಿಕ ಪೋಸ್ಟ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆತನನ್ನು ವಶಕ್ಕೆ ನೀಡುವಂತೆ ಇನ್ನೂರು ಜನ ಠಾಣೆ ಬಳಿ ಬಂದು ಆರೋಪಿಯನ್ನು ಗಲಾಟೆ ಮಾಡಿ, ಕಲ್ಲು ತೂರಿದ್ದರು. ಆಗ ಪೊಲೀಸರು ಅಶ್ರುವಾಯು ಸಿಡಿಸಿ, ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.
Log in to write reviews