ಬೆಂಗಳೂರು: ಅಡಕಮಾರನಹಳ್ಳಿ ಓವರ್ ಟ್ಯಾಂಕ್ ಬಳಿಯ ಮನೆಯಲ್ಲಿ ಗ್ಯಾಸ್ ಲೀಕೇಜ್‌ನಿಂದ ಘನ ಘೋರ ಘಟನೆ ನಡೆದಿದೆ. ಗ್ಯಾಸ್ ಲೀಕೇಜ್‌ಗೆ ಮನೆ ಹೊತ್ತಿ ಉರಿದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಕಿಯಲ್ಲಿ ಸುಟ್ಟ ಗಾಯಗಳಾಗಿರುವ ಮೂವರು ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತಿ ಕೂಡ ಗಂಭೀರವಾಗಿದೆ. ನಾಗರಾಜ್ ಹಾಗೂ ಶ್ರೀನಿವಾಸ್ ಮೃತ ದುರ್ದೈವಿಗಳು.
ಬಳ್ಳಾರಿಯವರಾಗಿದ್ದ ನಾಗರಾಜ್ ಕುಟುಂಬ 2 ವರ್ಷದ ಹಿಂದೆ ಅಡಕಮಾರನಹಳ್ಳಿಯಲ್ಲಿ ಗಂಗಯ್ಯ ಎಂಬುವವರಿಗೆ ಸೇರಿದ ಮನೆಯನ್ನು ಬಾಡಿಗೆಗೆ ಪಡೆದಿದ್ದರು. 50 ವರ್ಷದ ನಾಗರಾಜ್, ನಾಗರಾಜ್ ಪತ್ನಿ ಲಕ್ಷ್ಮಿದೇವಿ (35), ಮಕ್ಕಳು ಬಸನಗೌಡ (19) ಅಭಿಷೇಕ್ ಗೌಡ (18) ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.
ನಿನ್ನೆ ಬೆಳಗ್ಗೆ ಕೆಲಸಕ್ಕೆಂದು ತೆರಳುತ್ತಿದ್ದ ನಾಗರಾಜ್ ಅವರು ಮನೆಯ ದೇವರಿಗೆ ದೀಪ ಹಚ್ಚಿದ್ರು. ಅದೇ ವೇಳೆ 2ನೇ ಮಗ ಅಭಿಷೇಕ್, ಖಾಲಿಯಾಗಿದ್ದ ಸಿಲಿಂಡರ್ ಬದಲಾಯಿಸಲು ಹೋಗಿದ್ದಾನೆ. ಅಜಾಗರೂಕತೆಯಿಂದ ಸಿಲಿಂಡರ್ ಫಿಟ್ ಮಾಡುವಾಗ ಸಿಲಿಂಡರ್‌ನಿಂದ ಗ್ಯಾಸ್ ಲೀಕ್ ಆಗಿದೆ.
ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ದೀಪದ ಬೆಂಕಿ ತಗುಲಿದೆ. ತಕ್ಷಣವೇ ಇಡೀ ಮನೆ ಹೊತ್ತಿ ಉರಿದಿದೆ. ಬೆಂಕಿಯಲ್ಲಿ ನಾಗರಾಜ್, ಲಕ್ಷ್ಮಿದೇವಿ, ಬಸವನಗೌಡ, ಅಭಿಷೇಕ್ ಸಿಲುಕಿದ್ದಾರೆ. ಲಕ್ಷ್ಮಿದೇವಿ, ಬಸನಗೌಡ ಹೇಗೋ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ನಾಗರಾಜ್ ಹಾಗೂ 2ನೇ ಮಗ ಅಭಿಷೇಕ್ ಮನೆಯೊಳಗೆ ಬೆಂಕಿಯಲ್ಲಿ ಸಿಲುಕಿ ನರಳಾಡಿದ್ದಾರೆ. ಆಗ ಪಕ್ಕದ ಮನೆಯಲ್ಲಿದ್ದ ಶ್ರೀನಿವಾಸ್ ಹಾಗೂ ಶಿವಶಂಕರ್ ಎಂಬುವವರು ಬೆಂಕಿ ಹಾರಿಸಲು ಮುಂದಾಗಿದ್ದಾರೆ.
ನಾಗರಾಜ್ ಅವರ ಮಗ ಅಭಿಷೇಕ್‌ನನ್ನು ಉಳಿಸಲು ಹೋಗಿದ್ದ ಶ್ರೀನಿವಾಸ್ ಹಾಗೂ ಶಿವಶಂಕರ್ ಎಂಬುವವರಿಗೆ ಬೆಂಕಿ ತಗುಲಿದೆ. ಕೂಡಲೇ ಸ್ಥಳಿಯರು ಬೆಂಕಿ ತಗುಲಿದವರನ್ನ ವಿಕ್ಟೋರಿಯಾ ಆಸ್ಪತ್ರಗೆ ರವಾನಿಸಿದ್ದಾರೆ.
ಮನೆಯಲ್ಲಿ ಹೊತ್ತಿ ಉರಿದ ಬೆಂಕಿಯ ತೀವ್ರತೆಗೆ ಸುಟ್ಟು ಹೋದ ನಾಗರಾಜ್ ಹಾಗೂ ಶ್ರೀನಿವಾಸ್ ಮೃತಪಟ್ಟಿದ್ದಾರೆ. ಅಭಿಷೇಕ್, ಶಿವಶಂಕರ್, ಲಕ್ಷ್ಮೀದೇವಿ ಹಾಗೂ ಬಸವ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಭಿಷೇಕ್ ಸ್ಥಿತಿ ಕೂಡ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಮಾದನಾಯಕನಹಳ್ಳಿ ಪೊಲೀಸರು ಅನಾಹುತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Log in to write reviews