No Ads

ಸಾರಿಗೆ ಸಂಸ್ಥೆಗಳನ್ನು ಹಾಳು ಮಾಡಿದ್ದೇ ಬಿಜೆಪಿ: ಬೆಲ್ಲದ್ ಗೆ ಸಚಿವರ ಉತ್ತರ!

ಕರ್ನಾಟಕ 2025-03-26 16:59:03 100
post

ಸೋಷಿಯಲ್ ಮೀಡಿಯಾದಲ್ಲಿ ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಬಿಜೆಪಿ & ಕಾಂಗ್ರೆಸ್ ನಡುವೆ ಮತ್ತೊಂದು ಯುದ್ಧವೇ ಶುರುವಾಗಿದೆ. ಹಾಗೇ ಸಾರಿಗೆ ಸಂಸ್ಥೆ ಅವನತಿ ಹೊಂದುತ್ತಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದರೆ, ಕಾಂಗ್ರೆಸ್ ನಾಯಕರು ಈ ಆರೋಪಕ್ಕೆ ಉತ್ತರ ನೀಡುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ.
 

ಸಾರಿಗೆ ಸಚಿವರಿಗೆ ಸವಾಲನ್ನು ಎಸೆದಿದ್ದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆಗೆ ಇದೀಗ ತಿರುಗೇಟು ಸಿಕ್ಕಿದೆ.
 

ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಟ್ವೀಟ್ ಮಾಡಿ, 'ಮಾನ್ಯ ರಾಮಲಿಂಗಾ ರೆಡ್ಡಿ ಅವರೇ, ತಮ್ಮ ಸರ್ಕಾರ ಕಳೆದ‌ ಡಿಸೆಂಬರ್‌ನಲ್ಲಿ 20 ಅಂಬಾರಿ ಉತ್ಸವ ಬಸ್‌ಗಳನ್ನ ಕೆಎಸ್‌ಆರ್‌ಟಿಸಿಗೆ ಸೇರ್ಪಡೆಗೊಳಿಸಿದಾಗ, ಒಂದೇ ಒಂದು ಬಸ್ಸನ್ನ ಕೂಡಾ ಉತ್ತರ ಕರ್ನಾಟಕಕ್ಕೆ ನೀಡಿರಲಿಲ್ಲ. ಆದರೆ, ಈಗಾಗಲೇ ಸಾರಿಗೆ ಸಂಸ್ಥೆ ದಿವಾಳಿ ಹಂತ ತಲುಪಿದ್ದರೂ 2000 ಹೊಸ ಬಸ್‌ಗಳನ್ನು ಖರೀದಿಸುವುದಾಗಿ ಘೋಷಿಸಿದ್ದೀರಿ. ಈ ಎಲ್ಲಾ 2000 ಬಸ್‌ಗಳು ಕೇವಲ‌ ದಕ್ಷಿಣ ಕರ್ನಾಟಕಕ್ಕೇ ಮೀಸಲಾ? ಅಥವಾ ಇದರಲ್ಲಿ ಎಷ್ಟು ಬಸ್‌ಗಳನ್ನು ಉತ್ತರ ಕರ್ನಾಟಕದ ಸಾರಿಗೆ ಸಂಸ್ಥೆಗಳು ಪಡೆಯಲಿವೆ? ಎಂಬುದನ್ನು ಸ್ಪಷ್ಟಪಡಿಸಿ.' ಎಂದಿದ್ದರು. ಹೀಗೆ ಬೆಲ್ಲದ್ ಟ್ವೀಟ್‌ಗೆ ಇದೀಗ ಸಾರಿಗೆ ಸಚಿವರು ಉತ್ತರ ನೀಡಿದ್ದಾರೆ.

ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರ ಟ್ವೀಟ್ ಪ್ರತಿಕ್ರಿಯೆಯನ್ನ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು 'ಅರವಿಂದ್ ಬೆಲ್ಲದ್ ಅವರೇ, ಉತ್ತರ ಕರ್ನಾಟಕದ ಬಗೆಗಿನ ತಮ್ಮ ಕಾಳಜಿಗೆ ಸ್ಪಂದಿಸುತ್ತಾ, ಈ ಕಾಳಜಿಯು ತಮ್ಮ‌ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ತೋರಿದ್ದರೆ, ಉತ್ತರ ಕರ್ನಾಟಕದ ಜನರಿಗೆ ಸಾಕಷ್ಟು ಸಾರಿಗೆ ಸೌಲಭ್ಯವನ್ನು ನೀಡಿ, ಸಮಗ್ರ ಅಭಿವೃದ್ಧಿ ಕಾರ್ಯವನ್ನು ಮಾಡಬಹುದಿತ್ತೇನೋ.' ಎಂದು ಬಿಜೆಪಿ ಆಡಳಿತದ ವೈಫಲ್ಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ.

ಹಾಗೇ, 'ಸಾರಿಗೆ ಸಂಸ್ಥೆಗಳನ್ನು ಅಧೋಗತಿಗೆ ತಂದು ನಷ್ಟಕ್ಕೆ ಸಿಲುಕಿಸಿ ಹೋಗಿರುವ ತಮ್ಮ ಪಕ್ಷದ ಬಗ್ಗೆ ಕೆಲವಷ್ಟು ಸರಿಯಾದ ಮಾಹಿತಿಯನ್ನ ಇಟ್ಟುಕೊಳ್ಳಿ, ಟ್ಟೀಟ್ ಮಾಡಲು ಇದು ಸಹಕಾರಿಯಾಗುತ್ತದೆ. ಇಲ್ಲವಾದರೆ ಕೈ ತೋರಿಸಿ ಅವಲಕ್ಷಣ ಮಾಡಿಸಿಕೊಂಡಂತೆ ಆಗುತ್ತದೆ.' ಎಂದು ಬಿಜೆಪಿ ಆಡಳಿತದ ಅವಧಿಯ ಅಂಕಿ ಅಂಶಗಳನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದಾರೆ ಸಾರಿಗೆ ಸಚಿವರು.


 

No Ads
No Reviews
No Ads

Popular News

No Post Categories
Sidebar Banner
Sidebar Banner