ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ಬಿರುಸುಗೊಂಡಿದೆ. ಉಭಯ ಅಭ್ಯರ್ಥಿಗಳ ಪ್ರಚಾರ ಕಾರ್ಯಗಳು ಭರದಿಂದ ಸಾಗಿವೆ. ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರು ಮಾತ್ರ ತುಸು ಹೆಚ್ಚೇ ಶ್ರಮ ವಹಿಸಿ ಪ್ರಚಾರದಲ್ಲಿ ತೊಡಗಿದ್ದು ಹೆಚ್ಚಿನ ಜನರನ್ನು ತಲುಪುತ್ತ ಜನರ ಮನಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಜಮಖಂಡಿ ಬ್ಲಾಕ್ ಕಾಂಗ್ರೆಸ್ ನಿಂದ ಕೊಣ್ಣೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಸಂಯುಕ್ತ ಅವರು ತಮ್ಮನ್ನು ಪರಿಚಯಿಸಿಕೊಂಡ ರೀತಿ ನೆರೆದಿದ್ದವರಿಗೆ ಇಷ್ಟವಾಯಿತು. "ಸಂಯುಕ್ತ ಅಂದ್ರೆ ಯಾರು? ಸಂಯುಕ್ತ ಪಾಟೀಲ್ ಅಂದ್ರೆ ಜೆ ಟಿ ಪಾಟೀಲರ ದತ್ತು ಪುತ್ರಿ, ಆನಂದ್ ನ್ಯಾಮಗೌಡ ಅವರ ತಂಗಿ" ಎಂದು ಹೇಳುವ ಮೂಲಕ ತಾನು ಹೊರಗಿನವರಗಲ್ಲ ಎಂಬ ಸಂದೇಶ ಸಾರಿದರು. ಇನ್ನು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಸಂಯುಕ್ತ ಬರಗಾಲದ ಸಮಯದಲ್ಲಿ ಬರಪರಿಹಾರ ಕೊಡುವಲ್ಲಿ ಮೋದಿ ಸರ್ಕಾರ ಮಾಡಿದ ತಾರತಮ್ಯ ನೀತಿಯನ್ನು ಟೀಕಿಸಿದರು. ಬೆಲೆ ಏರಿಕೆಯನ್ನು ತಡೆಯುತ್ತೀವಿ ಅಂತ ಅಧಿಕಾರಕ್ಕೆ ಬಂದವರೇ ಹಿಂದೆಂದೂ ಕಾಣದಷ್ಟು ಬೆಲೆ ಏರಿಕೆ ಮಾಡಿದ್ದು ವಿಪರ್ಯಾಸ ಎಂದರು. ಬಿಜೆಪಿಗರು ಬಡವರಿಗೆ ಗ್ಯಾರಂಟಿ ಯೋಜನೆ ಕೊಟ್ಟರೆ ಸರ್ಕಾರಕ್ಕೆ ಹೊರೆ ಆಗುತ್ತದೆ ಅಂತಾರೆ ಆದ್ರೆ ಮೋದಿ ಸರ್ಕಾರ ಆಗರ್ಭ ಶ್ರೀಮಂತರ ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದರ ಬಗ್ಗೆ ಯಾಕೆ ಮಾತಾಡುವುದಿಲ್ಲ? ಅದು ಸರ್ಕಾರಕ್ಕೆ ಹೊರೆ ಅಲ್ಲವೇ ಎಂದು ಚಾಟಿ ಬೀಸಿದರು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತಾಡಿದ ಸಂಯುಕ್ತಾ ಪಾಟೀಲ್ ಅವರು ಹಲವಾರು ಯೋಜನೆಗಳ ವಿಷಯದಲ್ಲಿ ಹಾಲಿ ಸಂಸದರು ವಹಿಸಿದ ನಿರ್ಲಕ್ಷ್ಯ ಹಾಗೂ ಕೇಂದ್ರದಿಂದಾದ ಅನ್ಯಾಯದ ಬಗ್ಗೆ ಗಮನಸೆಳೆದರು. ಈ ಬಾರಿ ಕೆಲಸ ಮಾಡುವವರಿಗೆ ಜನ ಮತ ನೀಡಲಿದ್ದಾರೆ, ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮನೆಮನಸ್ಸುಗಳಿಗೆ ತಲುಪಿಸಿ ಮತಸೆಳೆಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು. ಸಭೆಯಲ್ಲಿ ಶಾಸಕರಾದ ಜೆ ಟಿ ಪಾಟೀಲ್, ಮಾಜಿ ಶಾಸಕರಾದ ಆನಂದ್ ನ್ಯಾಮಗೌಡ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಬಾಗಲಕೋಟೆ ರಣಕಣ : ನಾನು ಬಾಗಲಕೋಟೆಯ ಮಗಳು ; ಸಂಯಕ್ತ ಪಾಟೀಲ್ ವಾಗ್ಝರಿಗೆ ಜನ ಫಿದಾ
No Ads
Log in to write reviews