ಬೆಂಗಳೂರು: ಸಾಲಗಾರರಿಗೆ ಹಿಂಸೆ, ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ಕಂಪನಿಗಳು ಅಥವಾ ಲೇವಾದೇವಿದಾರರಿಗೆ ಮೂರು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಲು ಅವಕಾಶ ಕಲ್ಪಿಸುವ ಕಾಯ್ದೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ.
ಈ ಉದ್ದೇಶದಿಂದ 'ಕರ್ನಾಟಕ ಮೈಕ್ರೋ ಫೈನಾನ್ಸ್ ಕಂಪನಿಗಳು (ಹಣ ಲೇವಾದೇವಿ ನಿಯಂತ್ರಣ) ಮಸೂದೆ-2025' ಅನ್ನು ಸಿದ್ಧಪಡಿಸಿದೆ. ಇದರ ಕರಡು ಪ್ರತಿ 'ಪ್ರಜಾವಾಣಿ'ಗೆ ಲಭ್ಯವಾಗಿದೆ.
ಮಸೂದೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ತಕ್ಷಣದಿಂದಲೇ ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಮುಂದಾಗಿದೆ.
ರಾಜ್ಯದೊಳಗೆ ಸಾಲದ ವಹಿವಾಟು ನಡೆಸುವ ಎಲ್ಲ ಕಂಪನಿಗಳೂ ರಾಜ್ಯ ಸರ್ಕಾರದ 'ನೋಂದಣಿ ಪ್ರಾಧಿಕಾರ'ದಲ್ಲಿ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವವೂ ಮಸೂದೆಯಲ್ಲಿದೆ. ನೋಂದಣಿ ಮಾಡದೇ ವಹಿವಾಟು ನಡೆಸುವ ಸಾಲದಾತರಿಗೆ ಮೂರು ವರ್ಷದವರೆಗೆ ವಿಸ್ತರಿ ಸಬಹುದಾದ ಜೈಲು ಮತ್ತು ₹1 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ ವಿಧಿಸುವುದಕ್ಕೂ ಮಸೂದೆ ಅವಕಾಶ ಕಲ್ಪಿಸಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳು ಅಥವಾ ಲೇವಾದೇವಿದಾರರ ಪ್ರತಿನಿಧಿಗಳು ಸಾಲಗಾರರ ಮೇಲೆ ನಡೆಸುತ್ತಿರುವ ದೌರ್ಜನ್ಯ ಪ್ರಕರಣಗಳು ರಾಜ್ಯದಾದ್ಯಂತ ವರದಿಯಾ ಗುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ. 25ರಂದು ಉನ್ನತಮಟ್ಟದ ಸಭೆ ನಡೆಸಿದ್ದರು. ಅಲ್ಲದೆ, ಸಾಲ ಪಡೆಯುವವರ ಹಿತ ಕಾಪಾಡಲು ಸುಗ್ರೀವಾಜ್ಞೆ ಮೂಲಕ ತಕ್ಷಣವೇ ಕಾನೂನು ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದ್ದರು.
ಈ ಕಾನೂನು ಜಾರಿಗೆ ಬಂದ 30 ದಿನಗಳ ಒಳಗೆ ರಾಜ್ಯದಲ್ಲಿ ಕಾರ್ಯನಿರ್ವ ಹಿಸುವ ಎಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿಗಾರರು 'ನೋಂದಣಿ ಪ್ರಾಧಿಕಾರ'ದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೀಗೆ ನೋಂದಾಯಿಸುವ ಸಂದರ್ಭದಲ್ಲಿ ಸಾಲಕ್ಕೆ ವಿಧಿಸುವ ಬಡ್ಡಿ, ಸಾಲ ವಸೂಲು ಮಾಡುವ ಪದ್ಧತಿ ಸೇರಿದಂತೆ ಎಲ್ಲ ವಿವರಗಳನ್ನು ಕಡ್ಡಾಯವಾಗಿ ನೀಡಬೇಕು.
ನೋಂದಣಿ ವೇಳೆ ನೀಡಿದ ಮಾಹಿತಿಗಳನ್ನು ಪರಿಶೀಲಿಸಿದ ಬಳಿಕ, ಸರ್ಕಾರ ರೂಪಿಸಿದ ಕಾನೂನಿಗೆ ಬದ್ಧವಾಗಿರುವುದಾಗಿ ಲಿಖಿತವಾಗಿ ಮುಚ್ಚಳಿಕೆ ಬರೆಯಿಸಿಕೊಂಡು ಎರಡು ವರ್ಷ ಕಾರ್ಯನಿರ್ವಹಿಸಲು ನೋಂದಣಿ ಪ್ರಾಧಿಕಾರವು ಅನುಮತಿ ನೀಡಲಿದೆ. ಎರಡು ವರ್ಷಗಳ ಅವಧಿ ಮುಗಿಯುವ 60 ದಿನಗಳ ಮೊದಲು ನೋಂದಣಿ ಮರು ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಪರಿಶೀಲಿಸಿ ನೋಂದಣಿ ನವೀಕರಿಸಬೇಕೇ, ಬೇಡವೇ ಎಂದು ಎರಡು ವರ್ಷ ಮುಗಿಯುವುದಕ್ಕೆ 15 ದಿನಗಳ ಮೊದಲು ಪ್ರಾಧಿಕಾರವು ನಿರ್ಧರಿಸಲಿದೆ ಎಂದೂ ಮಸೂದೆ ಹೇಳಿದೆ.
ಸಾಲ ಪಡೆದವರಿಂದ ಬಂದ ದೂರುಗಳ ಆಧಾರದಲ್ಲಿ ಅಥವಾ ಸ್ವಯಂಪ್ರೇರಿತವಾಗಿ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿಗಾರರ ನೋಂದಣಿಯನ್ನು ಯಾವುದೇ ನೋಟಿಸ್ ನೀಡದೆ ರದ್ದುಪಡಿಸಲು ಕೂಡಾ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಸಾಲ ವಸೂಲಿ ಸಂದರ್ಭದಲ್ಲಿ ಆರ್‌ಬಿಐ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಬ್ಬ ಸಾಲಗಾರ ಎರಡು ಸಂಸ್ಥೆಗಳಿಂದ ಮಾತ್ರ ಸಾಲ ಪಡೆಯಬಹುದು. ಸಾಲದ ಒಟ್ಟು ಮೊತ್ತ ₹2 ಲಕ್ಷ ಮೀರುವಂತಿಲ್ಲ.
Log in to write reviews