ರಾಯಚೂರು: ಪ್ರೀತಿಸಿ ಮದುವೆಯಾದ ಯುವಜೋಡಿ ಪೋಷಕರಿಂದ ಬೇರೆ, ಬೇರೆ ಆಗಿರುವ ಚೆಲುವಿನ ಚಿತ್ತಾರದಂತಹ ಲವ್ ಸ್ಟೋರಿ ಸಿಂಧನೂರಿನಲ್ಲಿ ನಡೆದಿದೆ. ರಮೇಶನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಯಶೋಧ ಪೋಷಕರ ವಿರೋಧಕ್ಕೆ ಮನೆ ಬಿಟ್ಟು ಬೆಂಗಳೂರಿಗೆ ಹೋಗಿದ್ದರು. ಹುಡುಗಿ ಪೋಷಕರು ಅಪಹರಣದ ಕೇಸ್ ದಾಖಲಿಸುತ್ತಿದ್ದಂತೆ ಪೊಲೀಸರು ಯುವಜೋಡಿಯನ್ನು ಹುಡುಕಿ ಕರೆ ತಂದಿದ್ದಾರೆ.
ಈ ರಮೇಶ ಹಾಗೂ ಯಶೋಧ ಇಬ್ಬರು ಲಿಂಗಸುಗೂರಿನ ಈಚನಾಳದವರು. ಪ್ರೀತಿಸುತ್ತಿದ್ದ ಈ ಇಬ್ಬರು ರಾಯಚೂರು ಸಿಂಧನೂರು ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಕಾನೂನಿನ ಪ್ರಕಾರ ಮದುವೆಯಾಗಿದ್ದರು.
ರಮೇಶ, ಯಶೋಧ ಪ್ರೀತಿ, ಮದುವೆಗೆ ಹುಡುಗಿ ಪೋಷಕರ ವಿರೋಧ ಇತ್ತು. ಹೀಗಾಗಿ ಮದುವೆಯಾದ ಈ ಜೋಡಿ ಬೆಂಗಳೂರಿಗೆ ಹೋಗಿದ್ದರು. ಇಷ್ಟಕ್ಕೆ ಸುಮ್ಮನಾಗದ ಹುಡುಗಿ ಪೋಷಕರು ರಮೇಶನ ಮೇಲೆ ಅಪಹರಣದ ದೂರು ದಾಖಲಿಸಿದ್ದರು.
ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನು ಹುಡುಕಿ ವಾಪಸ್ ರಾಯಚೂರಿಗೆ ಕರೆತಂದಿದ್ದಾರೆ. ಪ್ರೀತಿಸಿ ಮದುವೆಯಾದ ಮೇಲೆ ಹೆತ್ತವರು ಇಬ್ಬರನ್ನು ದೂರ ದೂರ ಮಾಡಿದ್ದಾರೆ. ಹೆದರಿಸಿ ಬೆದರಿಸಿ ನನ್ನ ಹೆಂಡತಿಯನ್ನು ಅವಳ ಪೋಷಕರು ಕರೆದುಕೊಂಡು ಹೋಗಿದ್ದಾರೆ. ನನಗೂ ಸಹ ಜೀವ ಬೆದರಿಕೆ ಇದೆ ಎಂದು ರಮೇಶ್ ಆರೋಪಿಸಿದ್ದಾರೆ.
ನನ್ನ ಹೆಂಡತಿ ಯಶೋಧಳಿಗೆ ಅವರ ಪೋಷಕರು ಮತ್ತೊಂದು ಮದುವೆಗೆ ತಯಾರಿ ನಡೆಸಿದ್ದಾರೆ. ಅವಳು ಇಲ್ಲದಿದ್ದರೆ ನಾನು ಜೀವಂತವಾಗಿ ಇರೋದಿಲ್ಲ ಎಂದು ರಮೇಶ ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Log in to write reviews